Advertisement

ರೈತರು ಪಾರಂಪರಿಕ ಕೃಷಿ ಸಂಸ್ಕೃತಿ ಉಳಿಸಲಿ

05:48 PM Jan 04, 2022 | Team Udayavani |

ಹುಬ್ಬಳ್ಳಿ: ಕೃಷಿಕರು ರಾಸಾಯನಿಕ ರಸಗೊಬ್ಬರ ಕಂಪನಿಗಳು ತೋರಿಸುತ್ತಿರುವ ಭ್ರಮಾಲೋಕದಿಂದ ಹೊರಬಂದು ದೇಶದ ಪಾರಂಪರಿಕ ಕೃಷಿ ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಹೊರಬೇಕು ಎಂದು ಗದಗ ಶಿವಾನಂದ ಮಠದ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.

Advertisement

ಭಾರತೀಯ ಕಿಸಾನ್‌ ಸಂಘ-ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಹುಬ್ಬಳ್ಳಿ, ಧಾರವಾಡ ಜಿಲ್ಲೆಯಿಂದ ಇಲ್ಲಿನ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಸೋಮವಾರ ಆಯೋಜಿಸಿರುವ ಪ್ರಾಂತ ರೈತ ಸಮ್ಮೇಳನ-2022 ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದೆ ರಾಜಮಹಾರಾಜರ ಕಾಲದಲ್ಲೂ ಕೃಷಿ ಇತ್ತು. ಆದರೆ ಇಂದು ಆಧುನಿಕತೆಯ ಹೆಸರಲ್ಲಿ ಕೃಷಿಯಲ್ಲಿ ನಾವು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ದೊಡ್ಡ ದೊಡ್ಡ ಕಂಪನಿಗಳು ಕೃಷಿ ಕ್ಷೇತ್ರದಲ್ಲಿ ಸೃಷ್ಟಿಸುತ್ತಿರುವ ಭ್ರಮೆ ವಾಸ್ತವ ಎಂದು ತಿಳಿದಿದ್ದೇವೆ. ಆ ಮೂಲಕ ಭಾರತೀಯ ರೈತರ ದೊಡ್ಡ ಬೀಜದ ಬ್ಯಾಂಕ್‌ನ್ನೇ ಸರ್ವನಾಶ ಮಾಡಿವೆ. ಇದೆಲ್ಲ ಬೆಳವಣಿಗೆ ಗಮನಿಸಿದರೆ ಇಡೀ ಮನುಕುಲ ಆತಂಕಕ್ಕೊಳಗಾಗುವಂತಾಗಿದೆ. ರೈತನ ಹಣೆಬರೆಹ ಕಂಪನಿಗಳು ಬರೆಯುತ್ತಿದ್ದು, ಆ ಮೂಲಕ ರೈತ ಮೂರ್ಖನಾಗುತ್ತಿದ್ದಾನೆ ಎಂದರು.

ಈ ಮೊದಲು ನಮ್ಮ ರೈತರು ಮನೆಯಲ್ಲೇ ತಯಾರಿಸುತ್ತಿದ್ದ ಬಿತ್ತನೆ ಬೀಜಗಳಲ್ಲಿ ಸತ್ವ-ಪುನರಾಭಿವೃದ್ಧಿಯ ನಿರಂತರತೆಯ ಸಾಮರ್ಥ್ಯವಿತ್ತು. ಆದರಿಂದು ನಮ್ಮತನ ನಾವು ಕಳೆದುಕೊಂಡಿದ್ದರಿಂದ ಯಾವ ರೈತರ ಮನೆಯಲ್ಲೂ ಬೀಜಗಳು ಕಾಣುತ್ತಿಲ್ಲ. ಪ್ರಕೃತಿ ಇರುವುದೇ ಪ್ರತಿಯೊಬ್ಬರ ಶರೀರ ಗಟ್ಟಿಗೊಳಿಸಲು. ಆದರೆ ರೈತರೇ ಇದಕ್ಕೆ ಮೆತ್ತಗಾದರೆ ಹೇಗೆ? ರೈತರು ಇಂದು ತಮ್ಮ ಅದ್ಭುತ ಜೀವ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ.

ಇಂದು ಕೃಷಿಕರು ಅನುಭವಿಸುತ್ತಿರುವುದು ರಾಜಕೀಯ ಸಮಸ್ಯೆಯಲ್ಲ. ಬದಲಾಗಿ ಅವರಲ್ಲಿನ ಸ್ವಭಾವ, ಮನೋಭಾವವಾಗಿದೆ. ಪ್ರಕೃತಿಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಆದರೆ ಭೂಮಿ-ಆಕಳು ಎಂದೂ ರೈತನನ್ನು ಮೋಸಗೊಳಿಸಲ್ಲ. ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನದ ಅನಿವಾರ್ಯತೆ ಜತೆ ಮಕ್ಕಳಿಗೆ ವಿದ್ಯೆ ಕಲಿಸುವುದರ ಜತೆಗೆ ಜವಾಬ್ದಾರಿ ಅರಿತು ಅವರ ಕೈಯಲ್ಲಿ ನೇಗಿಲು, ಕೂರಗಿ ಕೊಡಬೇಕು. ನಿಮ್ಮ ಕೃಷಿ ಹಸ್ತಾಂತರಿಸಬೇಕು. ಜವಾರಿ ಬೀಜಗಳ ಸಂರಕ್ಷಣೆ ಮಾಡಬೇಕು. ಅಂದಾಗಲೇ ದೇಶದಲ್ಲಿ ಕೃಷಿ ಸಂಸ್ಕೃತಿ ಉಳಿದು, ಬೆಳೆಯಲು ಸಾಧ್ಯ. ನೇಗಿಲ ಮೇಲೆಯೇ ಧರ್ಮ ನಿಂತಿದೆ ಎಂದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಎಂಟನೂರು ದೇಶಿ ಗೋವುಗಳ ಸಂರಕ್ಷಕ, ಕೊಪ್ಪಳದ ಭರಮಣ್ಣ ಗುರಿಕಾರ, ರಾಜ್ಯದಲ್ಲಿ ಗೋ ಶಾಲೆ, ವೃದ್ಧಾಶ್ರಮಗಳು ಇರಬಾರದು. ಗೋವುಗಳು ದೇವರಿಗೆ ಸಮಾನ. ಕನಿಷ್ಠ ಮನೆಗೊಂದು ಗೋವು ಸಾಕುವ ಪ್ರತಿಜ್ಞೆ ರೈತರು ಮಾಡಬೇಕು ಎಂದರು.

Advertisement

ಭಾರತೀಯ ಕಿಸಾನ್‌ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಸನ ಮುಕ್ತ ಸಮಾಜ, ವಿಷಮುಕ್ತ ಆಹಾರ ಮಾಡಬೇಕೆಂಬುದೇ ಸಂಘದ ಧ್ಯೇಯೋದ್ದೇಶವಾಗಿದೆ ಎಂದರು. ಅತಿಥಿಯಾಗಿ ಮಾತನಾಡಿದ ಭಾರತೀಯ ಕಿಸಾನ್‌ ಸಂಘದ ಅಖೀಲ ಭಾರತ ಅಧ್ಯಕ್ಷ ಐ.ಎನ್‌. ಬಸವೇಗೌಡ, ಮೌಲ್ಯಾಧಾರಿತ ಬೆಳೆ ಬೆಳೆಯುವುದು ನಮ್ಮ ಜವಾಬ್ದಾರಿ ಆಗಿದೆ. ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು. ಮಣ್ಣಿಗೆ ಅನುಗುಣವಾದ ಬೆಳೆ ಬೆಳೆಯಬೇಕಾಗಿದೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕೃಷಿ ಲಾಭದಾಯಕ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ. ಕೃಷಿಯೇ ನಮ್ಮ ಮೂಲ ಸಂಸ್ಕೃತಿ. ಉದ್ಯೋಗಾಧಾರಿತ ಕೃಷಿ ಮಾಡಿದಾಗ ನಾವು ಬದುಕಲು ಸಾಧ್ಯ ಎಂದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಘದ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ದೊಣೂರ ರಾಮು, ಪ್ರಮುಖರಾದ ವೀಣಾ ಸತೀಶ, ಗಂಗಾಧರ ಕಾಸರಘಟ್ಟ, ಪರಮೇಶ್ವರಪ್ಪ, ವಿವೇಕ ಮೋರೆ, ದಕ್ಷಿಣ ಪ್ರಾಂತ ಅಧ್ಯಕ್ಷ ರಾಜೇಂದ್ರ ರಾಮಾಪುರ ಮೊದಲಾದವರಿದ್ದರು.

ಸಮ್ಮೇಳನ ಸಂಚಾಲಕ ರಮೇಶ ಕೊರವಿ ಸ್ವಾಗತಿಸಿದರು. ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂತ ಪ್ರ.ಕಾರ್ಯದರ್ಶಿ ರಾಘವೇಂದ್ರ ಜಹಗೀರದಾರ ನಿರೂಪಿಸಿದರು. ಉ.ಜಿಲ್ಲಾ ಕಾರ್ಯದರ್ಶಿ ಮಾಧವ ಹೆಗಡೆ ವಂದಿಸಿದರು. ಕಾರ್ಯಕ್ರಮದ ಮೊದಲು ಗೋಪೂಜೆ ಮಾಡಲಾಯಿತು.

ಲಾಭದಾಯಕ ಬೆಳೆಗೆ ಆಗ್ರಹಿಸಿ 11ರಂದು ಧರಣಿಗೆ ನಿರ್ಧಾರ 
ಲಾಭದಾಯಕ ಬೆಳೆಗೆ ಆಗ್ರಹಿಸಿ ಜ.11ರಂದು ದೇಶಾದ್ಯಂತ ಧರಣಿ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಸಮ್ಮೇಳನದ ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಭಾರತೀಯ ಕಿಸಾನ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಸವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next