Advertisement
ನವೆಂಬರ್ 29 ಮತ್ತು 30ರಂದು 50,000 ರೈತರು, ಕೃಷಿ ಕೆಲಸಗಾರರು ದೇಶದ ರಾಜಧಾನಿಯ ರಾಮಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು. ಇದರಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ರಾಜ್ಯಗಳ ರೈತರೂ ಇದ್ದರು.
Related Articles
Advertisement
ಹಸಿರು ಕ್ರಾಂತಿಯ ಹೆಸರಿನಲ್ಲಿ ಭಾರತದ ಕೃಷಿರಂಗಕ್ಕೆ 1960ರ ದಶಕದಲ್ಲಿ ಅಧಿಕ ಇಳುವರಿ ತಳಿಗಳ, ರಾಸಾಯನಿಕ ಗೊಬ್ಬರಗಳ ಮತ್ತು ಪೀಡೆನಾಶಕಗಳ ಪ್ರವೇಶವಾಯಿತು. ಇದರಿಂದಾಗಿ ಕೃಷಿಜಮೀನಿನ ಉತ್ಪಾದಕತೆ ಹೆಚ್ಚಿತು. ಅದೇನಿದ್ದರೂ, ಇತ್ತೀಚೆಗಿನ ವರ್ಷಗಳಲ್ಲಿ ಎಕರೆವಾರು ಇಳುವರಿ ಹೆಚ್ಚಾಗುತ್ತಿಲ್ಲ; ಆದರೆ ಕೃಷಿಯ ವೆಚ್ಚ ಏರಿಕೆಯಾಗುತ್ತಿದ್ದು, ರೈತರ ಆದಾಯ ಕುಸಿಯುತ್ತಿದೆ. ಜೊತೆಗೆ, ಅಂತರ್ಜಲ ಮಟ್ಟ ಕುಸಿತ ಮತ್ತು ಮಾಲಿನ್ಯ ಇಂತಹ ಪರಿಸರ ವಿನಾಶಕಾರಿ ಪರಿಣಾಮಗಳಿಂದಾಗಿ ಒಟ್ಟಾರೆಯಾಗಿ ಕೃಷಿಕರು ಕಂಗಾಲು.
ರೈತರು ಮತ್ತೆಮತ್ತೆ ಆಕ್ರೋಶದಿಂದ ಪ್ರತಿಭಟಿಸುತ್ತಿರುವಾಗ, ಕೇಂದ್ರ ಸರಕಾರ ಏನು ಮಾಡುತ್ತಿದೆ? 2022ರ ಹೊತ್ತಿಗೆ ರೈತರ ಆದಾಯ ಇಮ್ಮಡಿಗೊಳಿಸುವ ಘೋಷಣೆ ಮಾಡುತ್ತಾ, ಅದಕ್ಕಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ಆ ಮಹಾನ್ ಗುರಿ ಸಾಧಿಸಬೇಕಾದರೆ, ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ.
ಮೊದಲನೆಯದಾಗಿ, ಕುಸಿಯುತ್ತಿರುವ ಉತ್ಪಾದಕತೆಯನ್ನು ಮೇಲೆತ್ತಬೇಕಾಗಿದೆ. 2013ರ ಮಾಹಿತಿ ಪರಿಶೀಲಿಸಿದಾಗ, ಭಾರತದಲ್ಲಿ ಏಕದಳ ಧಾನ್ಯಗಳ ಸರಾಸರಿ ಇಳುವರಿ (ಹೆಕ್ಟೇರಿಗೆ) ಇತರ ಹಲವು ದೇಶಗಳ ಇಳುವರಿಗಿಂತ ಬಹಳ ಕಡಿಮೆ. ಉದಾಹರಣೆಗೆ, ನಮ್ಮ ದೇಶದ ಈ ಸರಾಸರಿ ಇಳುವರಿ, ಚೀನಾದ್ದಕ್ಕಿಂತ ಶೇಕಡಾ 39 ಕಡಿಮೆ. ನಮ್ಮ ದೇಶದ ಭತ್ತದ ಸರಾಸರಿ ಇಳುವರಿಯಂತೂ ಶೇ.46 ಕಡಿಮೆ. ಆದರೆ, ಪಂಜಾಬ್ ಮತ್ತು ಹರಿಯಾಣಗಳ ಗೋಧಿ ಮತ್ತು ಭತ್ತದ ಸರಾಸರಿ ಇಳುವರಿ ಇತರ ರಾಜ್ಯಗಳ ಸರಾಸರಿ ಇಳುವರಿಗಿಂತ ಜಾಸ್ತಿ ಎಂಬುದು ಗಮನಾರ್ಹ. 2018-19ರ ಮುಂಗಾರು ಮತ್ತು ಹಿಂಗಾರು (ಖಾರಿಫ್ ಮತ್ತು ರಾಬಿ) ಬೆಳೆಗಳ ಫಸಲಿಗೆ ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಇದು ಏಕದಳ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಪ್ರೇರಣೆಯಾದೀತೆಂದು ಆಶಿಸಬಹುದಾಗಿದೆ.
ನಮ್ಮ ಕೃಷಿರಂಗದ ಎರಡನೆಯ ಸವಾಲು ಕೃಷಿ ಹಿಡುವಳಿ ಮತ್ತು ನೀರಿಗೆ ಸಂಬಂಧಿಸಿದ್ದು. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಕುಟುಂಬದ ಕೃಷಿಜಮೀನು ಪಾಲಾದಾಗ, ತಲೆಮಾರಿನಿಂದ ತಲೆಮಾರಿಗೆ, ತಲಾ ಕೃಷಿ ಹಿಡುವಳಿಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಚಿಕ್ಕಚಿಕ್ಕ ಹಿಡುವಳಿಗಳಿಗೆ ಹೆಚ್ಚಿಗೆ ಹಣ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಯಾಂತ್ರೀಕರಣಕ್ಕೆ ತೊಡಕಾಗುತ್ತಿದೆ.
ಕರಾವಳಿ ಪ್ರದೇಶ ಹಾಗೂ ಉತ್ತಮ ಮಳೆಯಾಗುವ ಕೆಲವು ಪ್ರದೇಶಗಳ ಹೊರತಾಗಿ, ನಮ್ಮ ದೇಶದ ಉಳಿದೆಲ್ಲೆಡೆ ನೀರಿನ ಕೊರತೆಯ ಸಮಸ್ಯೆ ವರ್ಷದಿಂದ ವರುಷಕ್ಕೆ ಬಿಗಡಾಯಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆ ರಫ್ತು ಮಾಡುವುದು ಆತಂಕದ ಸಂಗತಿ. ಯಾಕೆಂದರೆ, ಇವನ್ನು ರಫ್ತು ಮಾಡುವುದೆಂದರೆ ನಿಜವಾಗಿ ನೀರನ್ನೇ ರಫ್ತು ಮಾಡಿದಂತೆ; ಆ ನೀರನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ, ಪ್ರಶಾಂತ್ ಗೋಸ್ವಾಮಿ ಮತ್ತು ಶಿವ ನಾರಾಯಣ… ನಿಷಾದ್ 2010ರÇÉೇ ವರದಿ ನೀಡಿದ್ದರು: ಕೃಷಿ ಉತ್ಪನ್ನಗಳ ರಫ್ತಿನ ಮೂಲಕ ನಮ್ಮ ದೇಶ 25 ಘನ ಕಿ.ಮೀ ನೀರನ್ನು ರಫ್ತು ಮಾಡಿದೆ ಎಂಬುದಾಗಿ. ಇದು ನಮ್ಮ ದೇಶದಲ್ಲಿ ಲಭ್ಯವಿರುವ ಒಟ್ಟು ನೀರಿನ ಶೇಕಡಾ ಒಂದು ಭಾಗ!
ಈ ಹಿನ್ನೆಲೆಯಲ್ಲಿ, ಹನಿ ನೀರಾವರಿಗೆ ಒತ್ತು ನೀಡಲೇ ಬೇಕಾಗಿದೆ. ಸುಸ್ಥಿರ ಕೃಷಿಯ ರಾಷ್ಟ್ರೀಯ ಮಿಷನ್ 13 ರಾಜ್ಯಗಳ 64 ಜಿÇÉೆಗಳಲ್ಲಿ ನಡೆಸಿದ ಅಧ್ಯಯನ ಗಮನಾರ್ಹ. ಹನಿ ನೀರಾವರಿ ಬಳಕೆಯಿಂದಾಗಿ, ಅಲ್ಲಿ ನೀರಿನ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ (ಮತ್ತು ಆ ಗೊಬ್ಬರಗಳ ವೆಚ್ಚ) ಕಡಿಮೆಯಾಗಿತು; ಜೊತೆಗೆ ಬೆಳೆಗಳ ಫಸಲಿನಲ್ಲಿ ಹೆಚ್ಚಳ ದಾಖಲಾಯಿತು: ಗೋಧಿಯಲ್ಲಿ ಶೇ.20 ಮತ್ತು ಸೋಯಾಬೀನ್‌ನಲ್ಲಿ ಶೇ.40 ಹೆಚ್ಚಳ. ಬಹುಪಾಲು ರೈತರು ಹನಿ ನೀರಾವರಿ ಅಳವಡಿಸಲು ಕಷ್ಟಸಾಧ್ಯ ಅದರ ಅಧಿಕ ವೆಚ್ಚದ ಕಾರಣದಿಂದಾಗಿ. ಆದ್ದರಿಂದ, ಸಣ್ಣ ಮತ್ತು ಅತಿಸಣ್ಣ ರೈತರು ಹನಿ ನೀರಾವರಿ ಅಳವಡಿಸಲು ಸಬ್ಸಿಡಿ ನೀಡುವುದು ಅತ್ಯಗತ್ಯ.
ಮೂರನೆಯದಾಗಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಯಾಕೆಂದರೆ, ರೈತನಿಗೆ ಸಿಗುವುದು ಗ್ರಾಹಕ ಪಾವತಿಸುವ ಬೆಲೆಯ ಅರ್ಧ ಪಾಲು ಅಥವಾ ಅದಕ್ಕಿಂತ ಕಡಿಮೆ. ಜೊತೆಗೆ, ಲೋಡಿಂಗ್, ಅನ್-ಲೋಡಿಂಗ್, ವೇಸ್ಟೇಜ… ಇತ್ಯಾದಿ ಹೆಸರಿನಲ್ಲಿ ರೈತರ ಶೋಷಣೆ ಮತ್ತು ಸುಲಿಗೆ ಸ್ವಾತಂತ್ರ್ಯ ಬಂದು 70 ವರುಷ ದಾಟಿದ ನಂತರವೂ ಮುಂದುವರಿದಿದೆ. ಕೇಂದ್ರ ಸರಕಾರವು 2003ರÇÉೇ ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯಿದೆ ರೂಪಿಸಿದ್ದರೂ ಹಲವು ರಾಜ್ಯಗಳು ಅದನ್ನು ಇನ್ನೂ ಜ್ಯಾರಿ ಮಾಡಿಲ್ಲ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಎಂಬ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ ಮಾಧ್ಯಮದ ಮಾರುಕಟ್ಟೆ ವ್ಯವಸ್ಥೆಯಿಂದ ರೈತರಿಗೆ ಪ್ರಯೋಜನ ಆದೀತೇ? ಕಾದು ನೋಡಬೇಕಾಗಿದೆ.
ನಾಲ್ಕನೆಯದಾಗಿ, ನಮ್ಮ ದೇಶದಲ್ಲಿ ಕೃಷಿರಂಗಕ್ಕೆ ಸಂಶೋಧನೆಯ ಬೆಂಬಲ ತೀರಾ ಕಡಿಮೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೆಂದ್ರಗಳ ಎಷ್ಟು ಸಂಶೋಧನೆಗಳು ರೈತಸ್ನೇಹಿ ಆಗಿವೆಯೆಂದು ಪರಿಶೀಲಿಸಿದರೆ ನಿರಾಸೆಯಾಗುತ್ತದೆ. ಈ ಶೋಚನೀಯ ಪರಿಸ್ಥಿತಿಗೆ ಒಂದು ಕಾರಣ, ಆ ಸಂಸ್ಥೆಗಳಿಗೆ ನೀಡುವ ಅನುದಾನಗಳ ಬಹುಪಾಲು ಸಂಶೋಧನೆಗಲ್ಲ; ಬದಲಾಗಿ ವೇತನ ಮತ್ತು ಭತ್ತೆಗಳಿಗೆ ವಿನಿಯೋಗ ಆಗುತ್ತಿರುವುದು. ಆದ್ದರಿಂದ, ಇನ್ನಾದರೂ ಕೃಷಿಸಂಶೋಧನೆಗಳು ರೈತರ ನೈಜ ಸಮಸ್ಯೆಗಳನ್ನು ಎತ್ತಿಕೊಳ್ಳಬೇಕಾಗಿದೆ.
ಇವೆಲ್ಲವನ್ನು ಗಮನಿಸಿದಾಗ, ಭಾರತದ ರೈತನ ಆದಾಯ ಕಳೆದ ಒಂದೆರಡು ದಶಕಗಳಲ್ಲಿ ಎಷ್ಟು ಹೆಚ್ಚಾಗಿದೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಇಂಡಿಯಾ ಸ್ಪೆಂಡ್ ವಿಶ್ಲೇಷಣೆ, ಈ ಪ್ರಶ್ನೆಗೆ ಉತ್ತರ ನೀಡಿದೆ. ಅದರ ಪ್ರಕಾರ: ಹತ್ತು ವರುಷಗಳ (2003ರಿಂದ 2013) ಅಂಕಿಸಂಖ್ಯೆಗಳನ್ನು ಏರುತ್ತಿರುವ ಕೃಷಿವೆಚ್ಚಗಳಿಗೆ ಹೊಂದಾಣಿಕೆ ಮಾಡಿದರೆ, ಭಾರತದ ರೈತನ ಆದಾಯ ಈ ಅವಧಿಯಲ್ಲಿ ವರ್ಷಕ್ಕೆ ಕೇವಲ ಶೇ.5 ಹೆಚ್ಚಾಗಿದೆ!
ಹಾಗಿರುವಾಗ, 2022ರಲ್ಲಿ, ಅಂದರೆ ಇನ್ನು ಮೂರೇ ವರ್ಷಗಳಲ್ಲಿ ರೈತರ ಆದಾಯವನ್ನು ಇಮ್ಮಡಿ ಮಾಡಬೇಕಾದರೆ ಕೇಂದ್ರ ಸರಕಾರ ಫಲಿತಾಂಶ-ನಿರ್ದೇಶಿತ ಯೋಜನೆಗಳನ್ನು ತುರ್ತಾಗಿ ಜಾರಿ ಮಾಡಲೇ ಬೇಕಾಗಿದೆ.
– ಅಡ್ಡೂರು ಕೃಷ್ಣ ರಾವ್