ಯಡ್ರಾಮಿ: ಮನುಷ್ಯ, ಪಶು, ಪಕ್ಷಿಗಳಿಗಷ್ಟೆ ಅಲ್ಲದೇ ಭೂಮಿ ಮೇಲಿನ ಜೀವ ಸಂಕುಲಕ್ಕೆಲ್ಲ ಫಲಾಪೇಕ್ಷೆ ಇಲ್ಲದೇ ಆಹಾರ ನೀಡುವಂತ ಶಕ್ತಿ ಇರುವುದು ರೈತನಿಗೆ ಮಾತ್ರ ಸಾಧ್ಯ ಎಂದು ಮುಖಂಡ ದಯಾನಂದ ಹಿರೇಮಠ ನಾಗರಳ್ಳಿ ಹೇಳಿದರು.
ತಾಲೂಕಿನ ನಾಗರಳ್ಳಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಆಗ್ರೋ ಕೇಂದ್ರ, ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ದೇಶದ ಬೆನ್ನೆಲುಬು, ರೈತನ ಪ್ರಗತಿಯಾದಾಗ ದೇಶದ ಅಭಿವೃದ್ಧಿ ಎನ್ನುವಂತ ಮಾತುಗಳು ಕೇವಲ ಭಾಷಣಕ್ಕೆ ಮೀಸಲಾಗಿವೆ. ಹಿಂದಿನಿಂದ ಇಲ್ಲಿಯ ವರೆಗಿನ ಸರ್ಕಾರಗಳು ರೈತ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ರೈತನ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ರೈತರ ಪ್ರಗತಿ ಕುರಿತು ಜನಪ್ರತಿನಿಧಿ ಗಳು, ಅಧಿಕಾರಿಗಳು, ಸರ್ಕಾರಗಳು ಮುತುವರ್ಜಿ ವಹಿಸಬೇಕು ಎಂದರು.
ಗ್ರಾಮದ ಪ್ರಗತಿಪರ ರೈತರಾದ ವೇ. ಸಿದ್ಧಬಸಯ್ಯ ಚಿಕ್ಕಮಠ, ಬಸವಂತ್ರಾಯ ಗೌಡ ಬಿರಾದಾರ, ಶರಣಪ್ಪ ಚೊಣ್ಣಿ ಇತರರನ್ನು ಸತ್ಕರಿಸಲಾಯಿತು. ರೈತ ಮುಖಂಡರಾದ ವೀರೇಶ ಸೊಪ್ಪಿನಮಠ, ಶ್ರೀಶೈಲ ಚಿಕ್ಕಮಠ, ಗುರಣ್ಣಗೌಡ ಬಿರಾದಾರ, ಶ್ರೀರಾಮ ಸೇನೆ ಮಖಂಡ ರುದ್ರಗೌಡ ಬಿರಾದಾರ, ಈರಣ್ಣಗೌಡ ಬಿರಾದಾರ, ಹಳ್ಳೆಪ್ಪ ನಾಟೀ ಕಾರ, ಮಲ್ಲಯ್ಯಸ್ವಾಮಿ ಹಿರೇಮಠ, ಸಾಂಬಶಿವ ಹಿರೇಮಠ ಇತರರಿದ್ದರು.