ದೊಡ್ಡಬಳ್ಳಾಪುರ: ದೊಡ್ಡದಾದ ಹಾಗೂ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಿರುವ ಗಣೇಶನನ್ನು ಪ್ರತಿಷ್ಠಾಪಿಸಿದರೆ ದೇವರು ವರ ನೀಡುತ್ತಾನೆ ಎಂಬ ತಪ್ಪು ಮನೋಭಾವ ಬೆಳೆದಿದೆ. ಅದು ನಿಲ್ಲಬೇಕು. ಪರಿಸರ ಸ್ನೇಹಿ ಗಣಪನಿಗೆ ಮೊದಲ ಆದ್ಯತೆ ನೀಡಬೇಕು ಎಂದು ಎಂದು ಪ್ರಗತಿಪರ ಕೃಷಿಕ ಶಿವಪ್ಪ ಹೇಳಿದರು. ನಗರದ ಬೆಸೆಂಟ್ ಪಾರ್ಕ್ ನಲ್ಲಿ ಸುಚೇತನ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್, ಪರಿಸರ ಸಿರಿ ಅಭಿವೃದ್ಧಿ ಸಂಘದಿಂದ ನಡೆದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಗಿದ ನಮ್ಮ ಪರಂಪರೆ: ಸಗಣಿಯಿಂದ ಪಿಳ್ಳೇರಾಯನ ಮಾಡಿ ಗಣಪ ನೆಂದು ಪೂಜಿಸುತ್ತಿದ್ದುದು ನಮ್ಮ ಪರಂಪರೆ. ಈ ಅಧುನಿಕ ಸಂಸ್ಕೃತಿಯಿಂದ ಪರಿಸರ ನಾಶವಾಗುತ್ತಿದ್ದು, ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಅನಾಹುತಗಳು ಸಂಭವಿಸುತ್ತವೆ. ಪರಿಸರ ಇಲ್ಲಿದಿದ್ದರೆ ಮನುಷ್ಯನಿಲ್ಲ. ಈ ಸತ್ಯ ಪ್ರತಿಯೊಬ್ಬರ ಅರಿವಿಗೆ ಬರಬೇಕಿದೆ. ಮಳೆ, ಬೆಳೆ ಇಲ್ಲದೆ ಬರಗಾಲ, ಇನ್ನೊಂದೆಡೆ ಅತಿವೃಷ್ಟಿಯಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ಜನರಲ್ಲಿ ಪರಿಸರ ಕಾಳಜಿ ಮೂಡಬೇಕಿದೆ ಎಂದು ಹೇಳಿದರು.
ಮೂರ್ತಿ ನೀವೇ ಸಿದ್ಧಪಡಿಸಿ ಪೂಜಿಸಿ: ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಮಕ್ಕಳು ಗಣೇಶ ಮೂರ್ತಿ ಸಿದ್ಧಪಡಿಸಿಕೊಂಡು ಪೂಜಿಸುವಂತೆ ಮಾಡುವ ಉದ್ದೇಶದಿಂದ ಕಾರ್ಯಾಗಾರ ನಡೆಸಲಾಗುತ್ತಿದೆ. ನಾವೇ ಸಿದ್ಧಪಡಿಸಿದ ಗಣೇಶ ಮೂರ್ತಿ ಪೂಜಿಸುವುದರಿಂದ ಗಣೇಶ ಹಬ್ಬ ಮತ್ತಷ್ಟು ಖುಷಿಕೊಡಲಿದೆ. ಇದರಿಂದ ನಮ್ಮ ಸುತ್ತಲಿನ ಪರಿಸರವನ್ನು ಗಣೇಶ ಹಬ್ಬದ ನೆಪದಲ್ಲಿ ಹಾಳಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.
ಗಣೇಶನ ಮೂರ್ತಿ ಸಿದ್ಧಪಡಿಸುವ ಕಲಾವಿದ ಬಿ.ಆರ್.ಬಸವರಾಜು, ಮಣ್ಣಿನಿಂದ ಗಣೇಶನ ಮೂರ್ತಿ ಸಿದ್ಧಪಡಿಸುವ ಕುರಿತು ಮಾರ್ಗದರ್ಶನ ನೀಡಿದರು. ಸುಮಾರು ನೂರಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಗಣೇಶ ಮೂರ್ತಿ ಸಿದ್ಧಪಡಿಸಿಕೊಂಡು ಹಬ್ಬದಲ್ಲಿ ಪೂಜಿಸಲು ತಮ್ಮ ಮನೆಗಳಿಗೆ ಕೊಂಡೊಯ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿದರು.
ಸುಚೇತನ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಗೌರವ ಅಧ್ಯಕ್ಷ ಕೆ.ಎನ್. ಮಂಜುನಾಥ್, ಅಧ್ಯಕ್ಷ ಸುನಿಲ್ ಗೌ ಡ ಸಲಹೆಗಾರ ಜಿ.ರಾಜಶೇಖರ್, ಭವಿಷ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಸಿವಿಕ್ ನ್ಯೂಸ್ ವರದಿಗಾರ ಎ.ರಮೇಶ್, ಸುಚೇತನ ಟ್ರಸ್ಟ್‌ನ ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಅನಿಲ್ ಗೌಡ, ಟ್ರಸ್ಟಿ ಪ್ರವೀಣ್, ಪಿ.ಎಸ್. ಲೋಕೇಶ್, ಶ್ರೀನಿವಾಸ್, ಶ್ರೀನಿಧಿ, ಪಿ.ಬಿ. ಲೋಕೇಶ್, ಭರತ್, ರೋಟ್ರಾಕ್ಟ್ ಕ್ಲಬ್ ಆಫ್ ವಿದ್ಯಾರಣ್ಯಪುರ ಸದಸ್ಯರು ಭಾಗವಹಿಸಿದ್ದರು.