Advertisement

ಅರ್ಹರಿಗೆ ಯೋಜನೆಗಳ ಲಾಭ ಸಿಗಲಿ

05:10 PM Apr 29, 2022 | Team Udayavani |

ರಾಯಚೂರು: ರೈತರಿಗೆ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನ ಮಾಡುವ ಮೂಲಕ ಸರ್ಕಾರವು ರೈತರ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳನ್ನು ಯಶಸ್ವಿಗೊಳಿಸಬೇಕು. ಅಧಿಕಾರಿಗಳು ಇನ್ನೂ ಹೆಚ್ಚಿನ ವೇಗದಲ್ಲಿ ಕೆಲಸ ಮಾಡುವ ಅಗತ್ಯವಿದೆ. ರಸಗೊಬ್ಬರ ಹಾಗೂ ಇನ್ನಿತರ ಸೌಲಭ್ಯಗಳನ್ನು ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳಿ ಎಂದರು.

ರಾಯಚೂರಿನ ನಗರಸಭೆಯು ಕರ ವಸೂಲಿಯಲ್ಲಿ ಶೇ.90ರಷ್ಟು ಗುರಿ ಸಾಧಿಸಿದ್ದು, ಶೇ.100ರಷ್ಟು ಗುರಿ ತಲುಪಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ವಾರ್ಡ್‌ಗಳಿಗೆ ಕಡ್ಡಾಯವಾಗಿ ನಿತ್ಯ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇಇ ಮೇನಕಾ ಪಟೇಲ್‌ ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ಶೇ.78ರಷ್ಟು ನೀರು ತುಂಬಿಸಲಾಗಿದೆ. ರಾಯಚೂರಿನಲ್ಲಿ 20, ಮಾನ್ವಿಯಲ್ಲಿ 76, ದೇವದುರ್ಗದಲ್ಲಿ 11, ಲಿಂಗಸುಗೂರು 3, ಸಿಂಧನೂರಿನಲ್ಲಿ 163 ಸೇರಿದಂತೆ ಒಟ್ಟು 273 ಕೆರೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ಯಾವುದೇ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

Advertisement

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಶಿವಣ್ಣ ಮಾತನಾಡಿ, ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲು ಈಗಾಗಲೇ ಜಿಲ್ಲೆಯ 6 ಕಡೆ ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲ ತಾಲೂಕಿನ ಜಾನುವಾರುಗಳಿಗೆ ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ನೀಡಬೇಕು. ಜಿಲ್ಲೆಯ ಪಶು ಆಸ್ಪತ್ರೆಗಳಿಗೆ ಸ್ವಂತ ಕಟ್ಟಡ ಹಾಗೂ ವೈದ್ಯರು ಕಡ್ಡಾಯವಾಗಿ ಇರಬೇಕು. ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ಆರು ತಿಂಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹಿಸಲು ಕಾರ್ಯದರ್ಶಿ ತಿಳಿಸಿದರು.

ಜಿಪಂ ಸಿಇಒ ನೂರ್‌ ಜಹಾರ್‌ ಖಾನಂ ಮಾತನಾಡಿ, ಸರ್ಕಾರಿ ಶಾಲೆಗಳ ಛಾವಣಿ ದುರಸ್ತಿ ಸೇರಿ ಸಣ್ಣ ಪುಟ್ಟ ಕೆಲಸಗಳಿಗೆ ಅನುದಾನ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಬೇರೆ ಯೋಜನೆಗಳ ಅನುದಾನ ಬಳಸಿ ದುರಸ್ತಿ ಮಾಡಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೊರಗುತ್ತಿಗೆ ಆಧಾರದಡಿ ನೇಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮನವಿ ಮಾಡಿದರು. ಎಡಿಸಿ ಡಾ| ಕೆ.ಆರ್‌. ದುರುಗೇಶ್‌, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್‌ ಶಿವಪೂರೆ, ಜಿಪಂ ಯೋಜನೆ ನಿರ್ದೇಶಕ ಮಡೋಳಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌., ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next