ಅಫಜಲಪುರ: ಸರ್ಕಾರ ರೂಪಿಸುವ ಸೌಲಭ್ಯ ಹಿರಿಯ ನಾಗರಿಕರಿಗೆ ತಲುಪುವಂತಾಗಲಿ ಎಂದು ಸಿವಿಲ್ ನ್ಯಾಯಾಧೀಶ ರಮೇಶ ಏಖಬೋಟೆ ಹೇಳಿದರು.
ಪಟ್ಟಣದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಹಿರಿಯ ನಾಗರಿಕರಿಗೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿಕೊಡುವ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವರು ಮಾನವಿಯತೆ ಮರೆತು ತಂದೆ-ತಾಯಿಯನ್ನು ಬೀದಿಗೆ ತಳ್ಳಿ ಐಷಾರಾಮ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅದೆಷ್ಟೋ ಹಿರಿಯ ನಾಗರಿಕರು ಬೀದಿಪಾಲಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರ ಪಿಂಚಣಿ, ಗುರುತಿನ ಚೀಟಿ, ಕೆಎಸ್‌ಆರ್‌ಟಿಸಿಯಿಂದ ರಿಯಾಯ್ತಿ ಬಸ್ ಪಾಸ್, ಸಂಧ್ಯಾ ಸುರಕ್ಷಾ, ಪೆನ್ಶನ್ ಯೋಜನೆ ಜಾರಿಯಲ್ಲಿವೆ. ಅಲ್ಲದೆ ಹಿರಿಯ ನಾಗರಿಕರಿಗೆ ಅಂದಾಜು ಮೂರು ಲಕ್ಷ ರೂ. ವರೆಗೆ ಆದಾಯ ವಿನಾಯಿತಿ ಹಾಗೂ 80 ವರ್ಷ ಮೀರಿದವರಿಗೆ ಐದು ಲಕ್ಷ ರೂ. ವರೆಗೆ ವಿನಾಯಿತಿ ಇದೆ. ಅವರು ಆದಾಯ ತೆರಿಗೆ ಕಟ್ಟಬೇಕಿಲ್ಲ ಎಂದು ಮಾಹಿತಿ ನೀಡಿದರು.
ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯ ಪಡೆಯಲು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಂಚೆ ಇಲಾಖೆ, ಸಾರಿಗೆ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧಿಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ, ಹಿರಿಯರನ್ನು ಪೂಜ್ಯ ಭಾವದಿಂದ ಕಾಣಬೇಕು. ಕೆಲವು ಹಿರಿಯ ನಾಗರಿಕರು ರಸ್ತೆ, ದೇವಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಉಪವಾಸವಿದ್ದೇ ಬದುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರಿ ಸಹಾಯಕ ಅಭಿಯೋಜಕ ಎಸ್.ಆರ್. ಹೊಸಮಠ, ತಾಲೂಕು ವಕೀಲರ ಸಂಘದ ಅದಕ್ಷ ಕೆ.ಜಿ. ಪೂಜಾರಿ, ಸಮಾಜ ಕಲ್ಯಾಣ ಅಧಿಕಾರಿ ಚೇತನ ಗುರಿಕಾರ, ಸಿದ್ದರಾಮ ಹೂಗಾರ, ಎಸ್.ಎಸ್. ಪಾಟೀಲ, ಹಿರಿಯ ವಕೀಲ ಎಸ್.ಜಿ. ಹುಲ್ಲೂರ ಮಾತನಾಡಿದರು.
ವಕೀಲ ಅರ್ಜುನ ಎಸ್. ಕೇರೂರ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಸಿಂದಗಿ, ಶೇಖರಪ್ಪ ಮಾಸ್ಟರ್ ಹಾಗೂ ಹಿರಿಯ ನಾಗರಿಕರು ಹಾಜರಿದ್ದರು. ವಕೀಲ ಪದ್ಮಣ್ಣ ಪೂಜಾರಿ ನಿರೂಪಿಸಿದರು, ವೈ.ಎಸ್. ಸಾಲಿಮನಿ ವಂದಿಸಿದರು.