ಚಿಕ್ಕಮಗಳೂರು: ರಾಜ್ಯದಲ್ಲಿ ಈಡಿಗ ಸಮುದಾಯ 26 ಉಪ ಪಂಗಡಗಳಾಗಿ ಹಂಚಿ ಹರಿದು ಹೋಗಿದ್ದು, ಈ ಎಲ್ಲಾ ಉಪ ಪಂಗಡಗಳು ಒಟ್ಟುಗೂಡಿದಾಗ ಸಮುದಾಯಕ್ಕೆ ಶಕ್ತಿ ಬರಲಿದೆ. ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬಲಿಷ್ಟಗೊಳ್ಳಲಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ಡಾ| ಎಂ.ತಿಮ್ಮೇಗೌಡ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘಗಳ ಒಕ್ಕೂಟ, ಜಿಲ್ಲಾ ಆರ್ಯ ಈಡಿಗ ಸಂಘ, ಜಿಲ್ಲಾ ಬಿಲ್ಲವ ಸೇವಾ ಸಂಘ, ಶ್ರೀ ನಾರಾಯಣ ಗುರು ಸಮಿತಿ ವತಿಯಿಂದ ಆಯೋಜಿಸಿದ್ದ ಸಮಾಜ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಆರ್ಯ ಈಡಿಗ ನಿಗಮ ಮಂಡಳಿ ಘೋಷಣೆ ಮಾಡುವ ಭರವಸೆ ಇದ್ದು ಹೆಚ್ಚಿನ ಅನುದಾನ ನಿರೀಕ್ಷೆ ಇದೆ. ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಭವರಸೆ ನೀಡಿದರು.
ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿ ಕ ಸಂಖ್ಯೆಯಲ್ಲಿ ಸಮುದಾಯದ ಜನರು ಇದ್ದಾರೆ. ಆದರೆ, ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ. ಉಪ ಪಂಗಡಗಳಲ್ಲಿ ಹಂಚಿ ಹರಿದು ಹೋಗಿರುವ ನಮ್ಮ ಸಮುದಾಯ ಒಗ್ಗೂಡಿ ನಾವೆಲ್ಲರೂ ಒಂದೇ ಪಂಗಡ ಎಂದು ನಮ್ಮ ಶಕ್ತಿ ಪ್ರದರ್ಶಿಸಬೇಕು. ಆಗ ನಾವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದರು. ಸರ್ಕಾರ ನಮ್ಮ ಕುಲ ಕಸುಬು ಕಿತ್ತುಕೊಂಡು ಒಳ್ಳೆಯ ಕೆಲಸ ಮಾಡಿದೆ. ಇಂದು ಸಮುದಾಯ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿದೆ. ವಿದ್ಯೆ ಸೊತ್ತಾಗಿದ್ದು, ಎಲ್ಲರೂ ಶಿಕ್ಷಣ ಪಡೆದುಕೊಳ್ಳುವ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮುಂದಿನ ದಿನಗಳಲ್ಲಿ ಪ್ರತೀ ತಾಲೂಕು ಕೇಂದ್ರಗಳಲ್ಲಿ ವಿದ್ಯಾಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ಅಲ್ಲಿ ಸಮಾವೇಶ ಮಾಡುವ ಮೂಲಕ ಸಮುದಾಯವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು 150 ವರ್ಷಗಳ ಹಿಂದೆ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ನಾರಾಯಣ ಗುರುಗಳ ತತ್ವ-ಸಿದ್ಧಾಂತಗಳನ್ನು ಜೀವಂತ ವಾಗಿರಿಸಿಕೊಳ್ಳುವ ಮೂಲಕ ವರ್ಗರಹಿತ ಸಮಾಜ ಕಟ್ಟುವ ಶಕ್ತಿ ಯುವಜನತೆಯ ಮುಂದಿದೆ. ಈ ನಿಟ್ಟಿನಲ್ಲಿ ಯುವಸಮುದಾಯ ಮುಂದಾಗಬೇಕು ಎಂದು ತಿಳಿಸಿದರು.
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೊಲ್ಲೂರಿನ ಆರ್ಯ ಈಡಿಗ ಮಹಾಸಂಸ್ಥಾನದಲ್ಲಿ 2020ರ ಫೆ.2ರಂದು ನಿಯೋಜಿತ ಪೀಠಾರೋಹಣ ಕಾರ್ಯಕ್ರಮ ನಡೆಯಲಿದ್ದು ಮುಂದೆ ಸೊಲ್ಲೂರು ದೊಡ್ಡ ಶಕ್ತಿಕೇಂದ್ರವಾಗಿ ಹೊರಹೊಮ್ಮಲಿ. ಈ ನಿಟ್ಟಿನಲ್ಲಿ ಸಮುದಾಯ ಬಲಿಷ್ಟ ಸಮುದಾಯವಾಗಿ ಬೆಳೆಯಲಿ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಆರ್ಯ ಈಡಿಗ ಸಂಘಟನೆ ಬಲಪಡಿಸುವ ಮೂಲಕ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕು. ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದರೆ ಹಿಂದಿನ ಮಹನೀಯರ ನಿಸ್ವಾರ್ಥ ಸೇವೆ ತಿಳಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೊಲೂರಿನ ನಿಯೋಜಿತ ಸ್ವಾಮೀಜಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಸಮಾಜಸೇವಾ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಸ್ವಾಮೀಜಿ ಅವರಿಗೆ ಮಹಿಳೆಯರಿಂದ ಪಾದಪೂಜೆ ನೆರವೇರಿಸಲಾಯಿತು. ಬಿ. ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯ ಈಡಿಗ ಬಿಲ್ಲವ ಸಮುದಾಯದ ಮುಖಂಡರಾದ ಪಿ.ಆರ್. ಸದಾಶಿವ, ದುಷ್ಯಂತ್, ಕೆ.ಸಿ. ಶಾಂತಕುಮಾರ್, ಎಂ.ಕೃಷ್ಣಪ್ಪ, ಕೆ.ರಾಜು. ಕೆ. ಚಂದ್ರಶೇಖರ್, ಪುಷ್ಪಲತಾ, ಪುಷ್ಪಾಂಜಲಿ, ಶಶಿಕಲಾ ಸೇರಿದಂತೆ ಅನೇಕರು ಇದ್ದರು. ವಾಸು ಪೂಜಾರಿ ಸ್ವಾಗತಿಸಿದರು. ಲೀಲಾವತಿ ರತ್ನಾಕರ ನಿರೂಪಿಸಿದರು.