Advertisement

ಬೆಳೆ ಹಾನಿ ಸಮೀಕ್ಷೆ ಪಾರದರ್ಶಕವಾಗಿರಲಿ

02:20 PM Aug 12, 2020 | Suhan S |

ಕಾರವಾರ: ಪ್ರವಾಹ ಕಾಮಗಾರಿ ವಿಳಂಬ ಮಾಡದೇ ಸಕಾಲದಲ್ಲಿ ಕೈಗೊಳ್ಳತ್ತಕ್ಕದ್ದು. ಪ್ರಕೃತಿ ವಿಕೋಪದಿಂದ ರೈತರ ಬೆಳೆನಾಶವಾಗಿದ್ದು, ತಾರತಮ್ಯವಿಲ್ಲದೆ ಸಮೀಕ್ಷೆ ನಡೆಸಬೇಕೆಂದು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಜಿಪಂ ಸಭಾಂಗಣದಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರೈತರ ಬೆಳೆ ಹಾನಿ ಸಮೀಕ್ಷೆಯನ್ನು ಪಾರದರ್ಶಕವಾಗಿ, ರೈತರ ಪರವಾಗಿ ಮಾಡಿ ಎಂದರು.

ಕೋವಿಡ್‌-19 ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ರ್‍ಯಾಂಕ್‌ ಮೂಲಕ ಜಿಲ್ಲೆ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿದ ವಿದ್ಯಾರ್ಥಿಗಳಿಗೆ ಜಿಪಂ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಆದರೆ ರಾಜ್ಯದ ಇತರೆ ಜಿಲ್ಲೆಗಳನ್ನು ಗಮನಿಸಿದರೆ ಫಲಿತಾಂಶದಲ್ಲಿ ನಾವು 10 ಮತ್ತು 15ನೇ ಸ್ಥಾನದಲ್ಲಿರುವುದು ಬೇಸರವಾಗಿದೆ ಎಂದರು.

ಚಿಕಿತ್ಸೆ ವೇಳೆ ತಾರತಮ್ಯ ಬೇಡ: ಕೋವಿಡ್‌-19 ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಕೋವಿಡ್‌ ಕೇಂದ್ರಗಳಲ್ಲಿ ಯಾವುದೇ ತಾರತಮ್ಯವಿಲ್ಲದಂತೆ ರೋಗಿಗಳಿಗೆ ಸೂಕ್ತವಾದ ಆಹಾರ ಮತ್ತು ಚಿಕಿತ್ಸೆ ನೀಡುವಂತಾಗಬೇಕಲ್ಲದೇ ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಆರೋಗ್ಯ ಇಲಾಖೆಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲಿಸಿದ ಅಧ್ಯಕ್ಷೆ ಜಯಶ್ರೀ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಗಳಿಗೆ ಮೊದಲ ಆದ್ಯತೆ ನೀಡಿ ಪರಿಹಾರ ವಿತರಿಸಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಲಾಕ್‌ಡೌನ್‌ ಕಾರಣದಿಂದ ಹಾನಿಯಾದ ಹೂ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಪ್ರಕಾರ ದಾಖಲಾದ 23.51 ಹೆಕ್ಟೇರ್‌ ವಿಸ್ತೀರ್ಣದ ತೋಟಗಾರಿಕಾ ಬೆಳೆಯ, 541 ರೈತರಿಗೆ 5,87,944 ಮೊತ್ತದ ಪರಿಹಾರ ಧನ ವಿತರಿಸಲಾಗಿದೆ ಮತ್ತು ಬೆಳೆ ಸಮೀಕ್ಷೆ ಹೊರತು ಪಡಿಸಿ 54.08 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬರುವ 1297 ರೈತರಿಗೆ 13.52 ಲಕ್ಷ ಮೊತ್ತದ ಪರಿಹಾರ ಧನಕ್ಕಾಗಿ ಅನುದಾನದ ಬೇಡಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪರಿಹಾರ ಧನ ವಿತರಿಸಲು 689.20 ಹೆಕ್ಟೇರ್‌ ವಿಸ್ತೀರ್ಣದ 1666 ರೈತರಿಗೆ 103.46 ಲಕ್ಷ ಮೊತ್ತದ ಅನುದಾನ ಬೇಕಾಗುತ್ತದೆ. ಸರ್ಕಾರದ ನಿರ್ಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ಮಳೆ ಪರಿಸ್ಥಿತಿ ಅವಲೋಕಿಸಿ ಶಿರಸಿ ತಾಲೂಕಿನ ಬದನಗೋಡ ಕೆರೆ ಕುರಿತು ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಪ್ರವಾಹದಿಂದ ಹಾನಿಗೊಳಗಾದ ಬದನಗೋಡ ಕೆರೆ ಪುನರ್‌ ಜೀವನ ಕಾಮಗಾರಿಗೆ ಈಗಾಗಲೇ ಗುತ್ತಿಗೆದಾರರನ್ನು ಕೂಡ ನೇಮಿಸಲಾಗಿರುತ್ತದೆ. ಕೆರೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಟಾರಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next