ಸಿಂಧನೂರು: ನಾಡಿನ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಮಕ್ಕಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಶ್ಲಾಘನೀಯ ಎಂದು ಬಸವಕೇಂದ್ರದ ಅಧ್ಯಕ್ಷ ಟಿ.ಎಂ. ಪಾಟೀಲ್ ಹೇಳಿದರು.
ನಗರದ ಎಲ್‌ಬಿಕೆ ಪದವಿ ಪೂರ್ವ, ನೊಬೆಲ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2022ನೇ ಸಾಲಿನ ಸಾಂಸ್ಕೃತಿಕ ಉತ್ಸವ, ಆಹಾರ ಮೇಳ, ದೇಶಿ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ದಿನಗಳಲ್ಲಿ ಹಿಂದಿನ ಪಾರಂಪರಿಕ ಬದುಕು, ಸಂಸ್ಕೃತಿ ಮರೆಯಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಯುವ ಸಮುದಾಯದಲ್ಲಿ ನಾಡಿನ ಹಿರಿಮೆ, ಗರಿಮೆ ತಿಳಿಸಿ, ಅವರನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಗಮನ ಸೆಳೆದಿದೆ. ಮಕ್ಕಳೇ ಆಹಾರ ತಯಾರಿಸಿ, ಹೋಟೆಲ್ ಮಾದರಿಯಲ್ಲಿ ಆಕರ್ಷಿಸಿದ್ದಾರೆ. ವಿದ್ಯಾರ್ಥಿನಿಯರು ಸೀರೆ ತೊಟ್ಟು ಆಗಮಿಸಿ, ನಾವು ಕೂಡ ವೀರವನಿತೆ ಚನ್ನಮ್ಮನಂತೆ ನಾಡಿನ ಕೀರ್ತಿ ಬೆಳಗುವ ಭವಿಷ್ಯದ ಪ್ರಜೆಗಳು ಎನ್ನುವುದನ್ನು ಸಾರಿದ್ದಾರೆ ಎಂದರು.
ಮಸ್ಕಿ ವಿದ್ಯಾನಿಕೇತನ ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್, ಅಧ್ಯಕ್ಷತೆ ವಹಿಸಿದ್ದರು. ನೋಬೆಲ್ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಪರಶುರಾಮ ಮಲ್ಲಾಪುರ, ಪತ್ರಕರ್ತರಾದ ಸಿದ್ದಪ್ಪ ಜಿನೂರು, ವೆಂಕೋಬ ನಾಯಕ, ಉಪನ್ಯಾಸಕ ರಾಮಣ್ಣ ಹಿರೆಬೇರ್ಗಿ, ಶಂಕರ ಪತ್ತಾರ, ಡಾ| ಅರುಣ್ ಕುಮಾರ್, ಜಯಪ್ಪ ಗೋರೆಬಾಳ, ನೊಬೆಲ್ ಕಾಲೇಜಿನ ಉಪ ಪ್ರಾಂಶುಪಾಲ ಆನಂದ.ಎಸ್., ನಾಗರಾಜ ಮರಕುಂಬಿ, ರವಿ ಮಲ್ಲಾಪುರ, ಹೊನ್ನಪ್ಪ ಬೆಳಗುರ್ಕಿ ಇದ್ದರು.