ಮೈಸೂರು: ನಗರದ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ-2019 ಕುರಿತು ವಿಚಾರ ವಿನಿಮಯ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಚರ್ಚೆಗೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಿದ್ದೆ. ಆದರೆ, ಯಾರೂ ಬಂದಿಲ್ಲ. ಕಾಂಗ್ರೆಸ್‌ನವರೇ ಪುರಭವನದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಿ. ನಾನು ಸೂಕ್ತ ಉತ್ತರ ನೀಡಲು ಸಿದ್ಧ ಎಂದು ಸವಾಲೆಸೆದರು.
ಈ ಕಾಯ್ದೆಯಿಂದ ದೇಶದಲ್ಲೇ ಇರುವ ಮುಸ್ಲಿಮ್ ಧರ್ಮಕ್ಕೆ ಸೇರಿದ ಪ್ರಜೆಗಳಿಗೆ ಯಾವುದೇ ತೊಂದರೆ ಇಲ್ಲ. ಇವರ ಬಳಿ ಯಾವ ದಾಖಲಾತಿಗಳನ್ನೂ ಕೇಳುವುದಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಆಫಾ§ನಿಸ್ತಾನ ದೇಶಗಳಿಂದ ಅಕ್ರಮವಾಗಿ ಬಂದಿರುವ ಮುಸಲ್ಮಾನರ ದಾಖಲಾತಿ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ಕಾಯ್ದೆ ಮೂಲಕ ದೇಶದ ಮುಸ್ಲಿಮರನ್ನು ಓಡಿಸುವ ಉದ್ದೇಶ ಇಲ್ಲ. ಅವರು ನಮ್ಮ ಭಾರತೀಯರು. ಈ ಕಾಯ್ದೆಯ ಮೂಲಕ ಮುಸ್ಲಿಮರನ್ನು ಹೊರಗಟ್ಟಲಾಗುತ್ತಿದೆ ಎಂದು ಹೇಳುತ್ತಿರುವುದು ಸುಳ್ಳು ಎಂದು ಹೇಳಿದರು. ಮುಸ್ಲಿಮರು ಆ ದೇಶಗಳಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಬಂದಿಲ್ಲ. ಅವರ ಬಳಿ ಮಾತ್ರ ದಾಖಲೆಗಳನ್ನು ಕೇಳುತ್ತಿದ್ದೇವೆ ಇದು ತಪ್ಪೇ’ ಎಂದು ಪ್ರಶ್ನಿಸಿದರು.
ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡರಾದ ಮಾರುತಿರಾವ್ ಪರ್ವಾ, ಮುಖಂಡರಾದ ಶ್ರೀಹರಿ, ಜೈನಸಮಾಜದ ಮುಖಂಡ ಹಂಸರಾಜ, ವಿದ್ಯಾ ಅರಸ್ ಸೇರಿದಂತೆ ಮತ್ತಿತರರು ಇದ್ದರು.
ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಹಲವು ಸಂಶಯಗಳಿದ್ದವು. ಈ ಕಾರ್ಯಕ್ರಮದಿಂದ ಅವು ದೂರವಾಗಿವೆ. ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳು ಆಗಬೇಕಿದೆ.
-ನೂರುಲ್ಲಾ ಷರೀಫ್ ಆದಂಖಾನ್, ಮಸೀದಿಯ ಕಾರ್ಯದರ್ಶಿ