Advertisement

ಹೋರಾಟದ ಸಾರಥ್ಯ ಬಿಎಸ್‌ವೈ ವಹಿಸಿಕೊಳ್ಳಲಿ

09:38 AM Nov 20, 2017 | |

ಬೆಂಗಳೂರು: “ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಲು ವೀರಶೈವರಿಗೂ ಮುಕ್ತ ಆಹ್ವಾನವಿದ್ದು, ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌ ಸಾರಥ್ಯ ವಹಿಸಿಕೊಂಡರೆ ನಮ್ಮ ಅಭ್ಯಂತರವಿಲ್ಲ’ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

Advertisement

ಭಾನುವಾರ ನಗರದಲ್ಲಿ ನಡೆದ ಲಿಂಗಾಯತ ಧರ್ಮ ಮಹಾಸಭಾದ 22ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, “ಬಸವ ಧರ್ಮ ಸ್ಥಾಪನೆ ಮಾಡುವ ಉದ್ದೇಶವನ್ನು ಹೋರಾಟ ಹೊಂದಿದ್ದು, ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮವಾಗಿದೆ. ಹೋರಾಟದಲ್ಲಿ ಭಾಗಿಯಾಗಲು ವೀರಶೈವರಿಗೂ ಮುಕ್ತ ಆಹ್ವಾನವಿದ್ದು, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಹೋರಾಟಕ್ಕೆ ಬಂದರೆ ಅವರಿಗೇ ಹೋರಾಟದ ಮುಂಚೂಣಿ ವಹಿಸಲಾಗುವುದು’ ಎಂದರು.

ಜೆ.ಎಚ್‌.ಪಟೇಲ್‌, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ, ಪಂಚಪೀಠ ಮಠಾಧೀಶರು ಸೇರಿದಂತೆ ಹಲವು ಜನರ ಪ್ರಮಾಣ ಪತ್ರಗಳಲ್ಲಿ ಲಿಂಗಾಯತ ಎಂದೇ ನಮೂದಿಸಲಾಗಿದೆ. ಶಂಕರಾಚಾರ್ಯರೇ ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳಿರುವ ಸಾಕ್ಷ್ಯಗಳಿವೆ. ಹಾಗಾದರೆ, ಈ ವೀರಶೈವರು ಯಾರು, ಯಾಕೆ ಇವರು ವೀರಶೈವರು ಎಂದು ಹೇಳುತ್ತಾರೆ, ಬಸವ ಧರ್ಮ ಸ್ಥಾಪನೆ ಮಾಡಬಾರದು ಎಂಬುದು ಇವರ ಉದ್ದೇಶವೇ ಎಂದು ಟೀಕಿಸಿದರು. 

ಈ ಮೊದಲು ನನಗೂ ವೀರಶೈವ-ಲಿಂಗಾಯತ ನಡುವಿನ ವ್ಯತ್ಯಾಸ ತಿಳಿದಿರಲಿಲ್ಲ. ಹೀಗಾಗಿಯೇ ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಯಡಿಯೂರಪ್ಪ, ಬಸವರಾಜ ಹೊರಟ್ಟಿ ಅವರೊಂದಿಗೆ ಅರ್ಜಿ ಸಲ್ಲಿಸಿದ್ದೆವು. ಮೂರು ಬಾರಿ ಸಲ್ಲಿಸಿರುವ ಅರ್ಜಿಗಳು ತಿರಸ್ಕೃತಗೊಂಡಿದ್ದು, ಎಲ್ಲಿಯವರೆಗೆ ವೀರಶೈವ ಎಂಬ ಪದ ಇರುತ್ತದೆಯೋ ಅಲ್ಲಿಯವರೆಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ನಮ್ಮ ಮೇಲೇಕೆ ಕಣ್ಣು?: ಸಿಖರು, ಬೌದ್ಧರು ಹಾಗೂ ಜೈನರು ಪ್ರತ್ಯೇಕ ಧರ್ಮವಾದಾಗ ಹಿಂದೂ ಧರ್ಮಕ್ಕೆ ಹಾನಿಯಾಗಿರಲಿಲ್ಲ. ಆದರೀಗ ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಹಿಂದೂ ಧರ್ಮಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಾರೆ. ಅಮಿತ್‌ ಶಾ ಅವರೇ ಲಿಂಗಾಯತರ ಮೇಲೇ ಯಾಕೆ ನೀವು ಕಣ್ಣುಬಿಡ್ತೀದ್ದೀರಾ, ಲಿಂಗಾಯತರು ದೇಶ ಪ್ರೇಮಿಗಳಾಗಿದ್ದು, ಮೊದಲು ನಾವು ಭಾರತೀಯರು, ಬಳಿಕ ಕನ್ನಡಿಗರು ಅದಾದ, ಮೇಲೆ ನಾವು ಲಿಂಗಾಯತರು ಎಂದು ಎಂ.ಬಿ.ಪಾಟೀಲ್‌ ಹೇಳಿದರು.

Advertisement

ಅಂತಾರಾಷ್ಟ್ರೀಯ ಸಮಾವೇಶ: ಜನವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, 20-25 ಲಕ್ಷ ಜನ ಸೇರಲಿದ್ದಾರೆ. ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸಿ ಇದು ಅಂತಿಮ ರ್ಯಾಲಿಯಾಗಿದೆ. ಲಿಂಗಾಯತ ಧರ್ಮದ ಉಪಪಂಗಡವಾಗಿರುವ ಜಂಗಮರನ್ನು ನಮ್ಮೊಂದಿಗೆ ಸೇರಿಸಿಕೊಂಡು ಹೋರಾಟ ನಡೆಸಲಾಗುವುದು. ನನಗೆ ಮೊದಲು ನನ್ನ ಸಮಾಜ ಮುಖ್ಯ, ಆನಂತರ ಪಕ್ಷ ಮತ್ತು ಚುನಾವಣೆ ಎಂದು ಪಾಟೀಲ್‌ ತಿಳಿಸಿದರು. 

ವೀರಶೈವರೂ ಬರಲಿ
ಲಿಂಗಾಯತ ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ ಬಸವ ಅನುಯಾಯಿಗಳಾಗುವುದಿಲ್ಲ. ಬಸವ ಮಾರ್ಗಗಳು, ಅವರ ತತ್ವಗಳನ್ನು ಪಾಲಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಚಿತ್ರನಟ ಚೇತನ್‌ ಹೇಳಿದರು. ಲಿಂಗಾಯತ ಧರ್ಮ ಮಹಾಸಭಾ 22ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಒಂದು ಧರ್ಮದ ಶ್ರೇಷ್ಠತೆ ಅಳೆಯಲು ಎಷ್ಟು ಭಕ್ತರಿದ್ದಾರೆ, ಅನುಯಾಯಿಗಳಿದ್ದಾರೆ, ಅದು ಎಷ್ಟು ದೇಶಗಳಲ್ಲಿದೆ ಎಂಬುದು ಮುಖ್ಯವಲ್ಲ. ಧರ್ಮದಲ್ಲಿ ಎಷ್ಟು ಸಮಾನತೆ, ತರ್ಕ ಬದ್ಧವಾದ ಯೋಚನೆ, ಸಾಮಾಜಿಕ ನ್ಯಾಯವಿದೆ  ಎಂಬುದು ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ನೋಡಿದರೆ ಬೌದ್ಧ ಧರ್ಮದ ಹಾಗೆ ಲಿಂಗಾಯತವೂ ಉತ್ತಮ ಧರ್ಮ ಎಂದರು.  ಪ್ರತ್ಯೇಕ ಧರ್ಮಕ್ಕೆ ನಮಗೆ ಅಡ್ಡಿಯಾಗಿರುವ ವೀರಶೈವರು, ನಮ್ಮ ವಚನ ಚಳವಳಿ ಹಾಗೂ ಬಸವ ತತ್ವ ಒಪ್ಪಿಕೊಂಡು ಹೋರಾಟಕ್ಕೆ ಅವರೂ ಸೇರಿಕೊಳ್ಳಲಿ. ಇಲ್ಲವೆ ಹಿಂದೂ ಧರ್ಮದಲ್ಲಿಯೇ ಉಳಿದುಕೊಳ್ಳಲಿ ಎಂದರು. 

ಹಿಂದೂ ಕೋಡ್‌ ಬಿಲ್‌ನ 2ನೇ ಉಪಬಂಧದಲ್ಲಿ ನೀಡಲಾಗಿರುವ ಹಿಂದೂ ಧರ್ಮದ ವ್ಯಾಖ್ಯಾನದಲ್ಲಿ ಲಿಂಗಾಯತ, ವೀರಶೈವ, ಬೌದ್ಧ, ಜೈನ, ಸಿಖರನ್ನು ಹಿಂದೂ ಎಂದು ಪರಿಗಣಿಸಲಾಗುತ್ತದೆ. ನಂತರ 1963ರಲ್ಲಿ ಸಿಖರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲಾಗಿದೆ. 1993ರಲ್ಲಿ ಬೌದ್ಧರಿಗೆ ಹಾಗೂ 2014ರಲ್ಲಿ ಜೈನ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. ಇನ್ನು ಲಿಂಗಾಯತ ಕಾಮ(,) ವೀರಶೈವ ಎಂದಿದ್ದು, ವೀರಶೈವರು ಹಾಗೂ ಲಿಂಗಾಯತರು ಬೇರೆ
ಬೇರೆ ಎಂದು ಸಂವಿಧಾನವೇ ತಿಳಿಸುತ್ತದೆ. 

 ●ಎಸ್‌.ಎಂ. ಜಾಮದಾರ್‌, ನಿವೃತ್ತ ಐಎಎಸ್‌ ಅಧಿಕಾರಿ
 
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆ ಕುರಿತು ವಿಭಿನ್ನವಾದ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಭಾರತೀಯರಿಗೆ ಗೋಳ್ವಾಲ್ಕರ್‌, ಸಾವರರ್‌ ಪ್ರತಿಪಾದಿಸಿದ ರಾಷ್ಟ್ರೀಯತೆ ಅಗತ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್‌ ಪ್ರತಿಪಾದಿಸಿದ ರಾಷ್ಟ್ರೀಯತೆ ಅಗತ್ಯವಿದೆ.
 ●ಸಿ.ಎಸ್‌.ದ್ವಾರಕನಾಥ್‌, ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next