ಮುಂಬಯಿ, ಜು. 15: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಇದರ ಮೀರಾ-ಭಾಯಂದರ್ ಶಾಖೆಯ ಹತ್ತನೇ ಸಂಸ್ಥಾಪನ ದಿನೋತ್ಸವವು ಜು. 10ರಂದು ಶಾಖೆಯ ಕಾರ್ಯಾಲಯದಲ್ಲಿ ನಡೆಯಿತು. ಮಂಡಳಿಯ ಸ್ಥಾಪಕ ಕಾಟಿಪಟ್ನ ಚಂದು ಮಾಸ್ಟರ್ ಅವರ ಬಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೀರಾ -ಭಾಯಂದರ್ ಶಾಖೆಯ ಕಾರ್ಯಾಧ್ಯಕ್ಷ ಸುರೇಶ್ ಕುಂದರ್ ಮಾತನಾಡಿ, ಶಾಖೆಯು 2011ರ ಜು. 10ರಂದು ಅಂಧೇರಿಯ ಶ್ರೀ ಲಕ್ಷ್ಮೀನಾರಾಯಣ ದೇವರ ಸಾನ್ನಿಧ್ಯದಲ್ಲಿ ಸ್ಥಾಪನೆಗೊಂಡು ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಜನಹಿತ ಕಾರ್ಯಗಳಿಂದ ಸದಸ್ಯರಿಂದಲೂ ಮಾತೃ ಸಂಸ್ಥೆಯಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆ ನಾವು ಸ್ವಂತ ಕಚೇರಿಯನ್ನು ಹೊಂದಿ ಜನರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಬೇಕು.
ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲು ನಾವು ಪ್ರಯತ್ನಿಸುತ್ತೇವೆ. ಯುವ ಜನಾಂಗ ಮುಂದೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮಂಡಳಿಯ ಸದಸ್ಯರಾಗಿ ಸಹಕರಿಸಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜಪರ ಕಾರ್ಯಗಳಿಗೆ ಮುಂದಾಗೋಣ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೂರ್ಯಕಲಾ ಸುವರ್ಣ, ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾವತಿ ಎಚ್. ಅಮೀನ್ ಮತ್ತು ಪ್ರಜಾ ವಿ. ಅಮೀನ್ ಹಾಗೂ ಪೂಜಾ ವಿ. ಅಮೀನ್, ಸುಜಾತಾ ಮೆಂಡನ್, ದೇವಕಿ ಎಚ್. ಕೋಟ್ಯಾನ್, ಉಪಾಧ್ಯಕ್ಷ ಧನಂಜಯ ಸಾಲ್ಯಾನ್, ಕೋಶಾಧಿಕಾರಿ ತಿಲಕ್ ಎನ್. ಸುವರ್ಣ, ಜತೆ ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಪತ್ ಶ್ರೀಯಾನ್, ರವಿ ಪುತ್ರನ್, ರವಿ ಸುವರ್ಣ, ಶಿವರಾಜ್ ಕಾಂಚನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಶಾಖೆಯು ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ದಶಮಾನೋತ್ಸವದ ಅಂಗವಾಗಿ ಸದಸ್ಯರಿಂದ ಕೇಕ್ ಕತ್ತರಿಸಲಾಯಿತು. ಸುಜಾತಾ ಮೆಂಡನ್ ಮತ್ತು ದೇವಕಿ ಎಚ್. ಕೋಟ್ಯಾನ್ ಪ್ರಾರ್ಥನೆಗೈದರು. ಮೀರಾ – ಭಾಯಂದರ್ ಶಾಖೆಯ ಕಾರ್ಯದರ್ಶಿ ಗಂಗಾಧರ ಬಂಗೇರ ಸ್ವಾಗತಿಸಿ, ಶಾಖೆಯ ಕಳೆದ ಹತ್ತು ವರ್ಷಗಳ ಕಾರ್ಯಚಟುವಟಿಕೆಗಳ ವಿವರವನ್ನಿತ್ತರು ಹಾಗೂ ಮುಂದಿನ ಪ್ರಗತಿ ಬಗ್ಗೆ ಆಶಯ ವ್ಯಕ್ತಪಡಿಸಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.