Advertisement

ಮನೆಗಳಿಂದಲೂ ಬಸವ ತತ್ವ ಪ್ರಚಾರ ನಡೆಯಲಿ

06:11 PM Aug 30, 2022 | Team Udayavani |

ಆಳಂದ: ಕೇವಲ ಮಠಗಳು ಮತ್ತು ಮಠಾ ಧೀಶರು ಮಾತ್ರ ಬಸವ ತತ್ವ ಆಚರಣೆ ಮಾಡಿದರೆ ಸಾಲದು, ಪ್ರತಿಯೊಬ್ಬರ ಮನೆ, ಮನಗಳ ಮೂಲಕವೂ ಆಚರಣೆಗೆ ತರುವ ಕಾರ್ಯವಾಗಬೇಕು ಎಂದು ಭಾಲ್ಕಿ ಸಂಸ್ಥಾನ ಹಿರೇಮಠದ ಗುರುಬಸವ ದೇವರು ನುಡಿದರು.

Advertisement

ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಆಯೋಜಿಸಿದ್ದ ತಿಂಗಳ ಕಾಲದ ದಶಮಾನೋತ್ಸವ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರಾವಣ ಉಪನ್ಯಾಸ, ವಚನ ಗಾಯನ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮೂಡಿಸುವುದರ ಜೊತೆಗೆ ಎಲ್ಲ ಮನೆ ಮನಗಳಲ್ಲಿ ಬಸವ ತತ್ವ ಪ್ರಚಾರಕ್ಕೆ ಇಲ್ಲಿನ ಶ್ರಾವಣ ಸಂಜೆ ಕಾರ್ಯಕ್ರಮ ಉತ್ತಮ ನಡೆಯಾಗಿದೆ. ಬಸವ ತತ್ವ ಸರ್ವ ಜನಾಂಗಕ್ಕೆ ದಾರಿದೀಪವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಬಸವ ತತ್ವ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ನಾಡಿನ ಬಸವ ಪರಂಪರೆ ಮಠಗಳ ಮಠಾಧಿಧೀಶರ ಸಭೆ ಕರೆದು ಮುಂದಿನ ಹೆಜ್ಜೆ ಇಡುವಂತಾಗಬೇಕು ಎಂದು ಹೇಳಿದರು.

ಕಲಬುರಗಿಯ ಸಹಾಯಕ ಪ್ರಧ್ಯಾಪಕ ಡಾ|ಟಿ. ಗುರುಬಸಪ್ಪ ಮಾತನಾಡಿ, ವೈಚಾರಿಕತೆಯಿಂದ ಕೂಡಿದ ಉಪನ್ಯಾಸಗಳು ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

Advertisement

ಬಸವ ಬೆಳದಿ ಹುಕ್ಕೇರಿಯ ಬಸವಧರ್ಮ ಪ್ರಚಾರ ಸಂಸ್ಥೆಯ ಶ್ರೀ ಶರಣಬಸವ ದೇವರು ಮಾತನಾಡಿ, ಪ್ರಸ್ತುತ ಪದವಿಗಳ ಗುಣಮಟ್ಟದ ಬಗ್ಗೆ ಕಿಡಿಕಾರಿ, ಶರಣರು ಯಾವುದೇ ಪದವಿ ಪಡೆದುಕೊಂಡಿಲ್ಲ, ಶರಣ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಉಪಾಧ್ಯಕ್ಷ ಅಪ್ಪಾರಾವ್‌ ಅಕ್ಕೊಣಿ ಶರಣ ಸಾಹಿತ್ಯ ಪರಿಷತ್‌ ನಡೆದು ಬಂದ ದಾರಿ ತಿಳಿಸಿದರು. ತಾಲೂಕು ಅಧ್ಯಕ್ಷ ಸಂಜಯ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಶರಣ ಧರ್ಮಣ್ಣಾ ಪೂಜಾರಿ, ನಿವೃತ್ತ ವೈದ್ಯಾಧಿ ಕಾರಿ ಡಾ|ಎ.ಎಂ. ಬುಜರ್ಕೆ, ಗುತ್ತಿಗೆದಾರ ರೇವಣಸಿದ್ಧಪ್ಪ ನಾಗೂರೆ, ಮಾಳಿ ಸಮಾಜದ ಅಧ್ಯಕ್ಷ ಪಂಡಿತ ಶೇರಿಕಾರ, ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಖಜೂರಿ ರಾಜಶೇಖರ ಹರಿಹರ್‌ ಮತ್ತಿತರರು ಆಗಮಿಸಿದ್ದರು. ಉಪನ್ಯಾಸಕ ರಮೇಶ ಮಾಡ್ಯಾಳೆ ಸ್ವಾಗತಿಸಿದರು. ಶಿಕ್ಷಕ ಧರ್ಮರಾಜ ಕೊರಳ್ಳಿ ನಿರೂಪಿಸಿದರು. ಲಕ್ಷ್ಮೀಕಾಂತ ಬೀದಿ ವಂದಿಸಿದರು. ಕಲಾವಿದ ಶಿವಶರಣಪ್ಪ ಪೂಜಾರಿ ವಚನ ಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next