Advertisement

ಹಿಂದುಳಿದವರ ಅಭಿವೃದ್ಧಿಕಾರ್ಯಗತವಾಗಲಿ: ಸಿದ್ದು

03:42 PM Nov 12, 2018 | |

ಚಿಕ್ಕಮಗಳೂರು: ಹಿಂದುಳಿದ ವರ್ಗದವರಿಗೆ ಶೈಕ್ಷಣಿಕ ಸಂಸ್ಥೆ ಬೇಕು. ಧಾರ್ಮಿಕ ಕೇಂದ್ರ ಬೇಕು ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಅದು ಕಾರ್ಯಗತವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ಜಿಲ್ಲಾ ಕುರುಬರ ಸಂಘದಿಂದ ಜಿಲ್ಲಾ ಪಂಚಾಯತ್‌ ಮುಂಭಾಗ ನಿರ್ಮಿಸಿರುವ ಕನಕ ಸಮುದಾಯ ಭವನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಕ್ಕೆ ಒಂದು ಗುರುಪೀಠ ಮಾಡಲೇಬೇಕು ಎಂಬ ಛಲದಿಂದ 1988 ರಿಂದ ಪ್ರಯತ್ನ ಆರಂಭಿಸಿ 1991ರಲ್ಲಿ ಕನಕ ಗುರುಪೀಠ ಸ್ಥಾಪನೆಯಾಯಿತು. ಅದರಡಿ ಶಿಕ್ಷಣ ಸಂಸ್ಥೆಗಳು ಬೆಳೆದಿವೆ. ಅಲ್ಲಿಯವರೆಗೆ ಕುರುಬ ಸಮಾವೇಶ ಮಾಡುವುದು ಉಂಡು ಎದ್ದು ಹೋಗುವ ಕೆಲಸ ನಡೆಯುತ್ತಿತ್ತು. ಈಗ ರಾಜ್ಯದ 4 ಭಾಗದಲ್ಲಿ ಕುರುಬ ಸಮಾಜದ ಗುರುಪೀಠಗಳು ತಲೆ ಎತ್ತಿವೆ. ಬೆಂಗಳೂರಿನಲ್ಲಿ ಮೂರ್‍ನಾಲ್ಕು ಕಡೆ ಇದ್ದ ಕುರುಬ ಸಮಾಜದ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆದಿತ್ತು. ಅದನ್ನು ತಡೆದು ಉಳಿಸಲಾಗಿದೆ ಎಂದರು. 

ಮುಖಂಡರು ಹಾಗೂ ಸಮುದಾಯದ ಸ್ವಾಮೀಜಿಗಳ ಪ್ರಯತ್ನದಿಂದ ಚಿಕ್ಕಮಗಳೂರಿನಲ್ಲಿ ಕನಕ ಸಮುದಾಯ ಭವನಕ್ಕೆ 5.5 ಎಕರೆ ಜಾಗ ಹಾಗೂ ಮೆಡಿಕಲ್‌ ಕಾಲೇಜಿಗೆಂದು 40 ಎಕರೆ ಭೂಮಿಯನ್ನು ಸರಕಾರ ಮಂಜೂರು ಮಾಡಿದೆ. ಮೆಡಿಕಲ್‌ ಕಾಲೇಜನ್ನೂ ನಾನೇ ಮಂಜೂರು ಮಾಡಿಸಿಕೊಟ್ಟೆ. ಆದರೆ, ಕಾಲೇಜ್‌ ಕಟ್ಟಡ ನಿರ್ಮಿಸಲು ದುಡ್ಡಿಲ್ಲ ಎಂದು ಕೈ ಚೆಲ್ಲಿದರು. 

1986 ರಲ್ಲಿ ನಾನು ಪಶುಸಂಗೋಪನಾ ಸಚಿವನಾಗಿದ್ದಾಗ ಕನಕ ಸಮುದಾಯ ಭವನಕ್ಕೆ ನಾನೇ ಅಡಿಗಲ್ಲು ಹಾಕಿದ್ದೆ. 32 ವರ್ಷದ ನಂತರ ಭವನ ಉದ್ಘಾಟನೆಯಾಗುತ್ತಿದೆ. ಇದರಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರ ಪ್ರಯತ್ನವೂ ಸಾಕಷ್ಟಿದೆ. ಕಟ್ಟಡ ನಿರ್ಮಿಸಲು ಇಲ್ಲಿಯ ತನಕ ಕಷ್ಟವಾಗಿರಬಹುದು. ಇನ್ನು ಮುಂದೆ ನಿರ್ವಹಣೆ ಕಷ್ಟವಾಗುವುದಿಲ್ಲ. ಈ ಜಿಲ್ಲೆಯಲ್ಲಿ ಬಾಡಿಗೆ ಕೊಟ್ಟು ಮದುವೆ ಮಾಡುವವರೇ ಜಾಸ್ತಿಯಾಗಿದ್ದಾರೆ. 

Advertisement

ಉದ್ಘಾಟನೆಗೆ ಮುನ್ನವೇ 8 ಮದುವೆ ಬುಕ್‌ ಆಗಿವೆ ಎಂದು ಕೇಳಿದೆ. ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ವಿಶಾಲ ಜಾಗವಿದೆ. ಹಾಗಾಗಿ ಇಲ್ಲಿಗೆ ಬಹಳ ಬೇಡಿಕೆಯೂ ಬರಲಿದೆ ಎಂದರು. ಕುರುಬ ಸಮುದಾಯದ ಬಡವರಿಗೆ ಆದಷ್ಟು ಕಡಿಮೆ ಬಾಡಿಗೆ ಪಡೆದು ಭವನ ಕೊಡಬೇಕು. ಇಲ್ಲದಿದ್ದರೆ ವ್ಯಾಪಾರ ಆಗಿಬಿಡುತ್ತದೆ. ಸರ್ಕಾರ ಅನುದಾನ ನೀಡಿರುವುದು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು. ಆ ಉದ್ದೇಶ ಈಡೇರಿದರೆ ಸಾರ್ಥಕತೆ ಹೆಚ್ಚಾಗುತ್ತದೆ ಎಂದರು. 

ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಏರುತ್ತಿದ್ದಂತೆ ಜಯಕಾರದ ಘೋಷಣೆ ಮಾರ್ಧನಿಸಿತು. ಕಾರ್ಯಕ್ರಮದುದ್ದಕ್ಕೂ ಸಂಘ, ಸಂಸ್ಥೆ ಹಾಗೂ ಅಭಿಮಾನಿಗಳಿಂದ  ಹಾರ ತುರಾಯಿ ಹಾಕಿ ಅಭಿನಂದಿಸಿದರು. ಹೆಲಿಕಾಪ್ಟರ್‌ ಸಮಯಕ್ಕೆ ಸರಿಯಾಗಿ ಟೇಕಾಫ್‌ ಆಗಬೇಕಿದ್ದ ಕಾರಣ ಸ್ವತಃ ಸಿದ್ದರಾಮಯ್ಯ ನಾನೇ ಭಾಷಣ ಆರಂಭಿಸುವುದಾಗಿ ಮೈಕ್‌ ಮುಂದೆ ನಿಂತರು. ಆದರೂ ಹಾರ ಹಾಕುವವರ ಸಂಖ್ಯೆ ಹೆಚ್ಚಾದಾಗ ಒಂದು ಹಂತದಲ್ಲಿ ತುಸು ಕೋಪದಿಂದ ಅಭಿಮಾನಿಗಳನ್ನು ಗದರಿಸಿ ಸುಮ್ಮನಿರಿಸಿದ ಸಿದ್ದರಾಮಯ್ಯ ಮಾತು ಆರಂಭಿಸಿದರು. ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಾಗವಹಿಸಿದ್ದರು.

ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ
ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ಸಚಿವ ಆರ್‌.ಶಂಕರ್‌, ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಶಾಸಕರಾದ ಸಿ.ಟಿ.ರವಿ, ಟಿ.ಡಿ. ರಾಜೇಗೌಡ, ಎಂ.ಪಿ. ಕುಮಾರಸ್ವಾಮಿ, ಎಸ್‌.ಎಲ್‌. ಧರ್ಮೇಗೌಡ, ಎಸ್‌.ಎಲ್‌. ಭೋಜೇಗೌಡ ಮಾತನಾಡಿದರು.
 
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್‌, ಎಂ ಎಲ್‌ ಸಿ ಪ್ರಾಣೇಶ್‌, ಮಾಜಿವರಾದ ಡಾ| ಮೋಟಮ್ಮ, ಬಿ.ಬಿ. ನಿಂಗಯ್ಯ, ಮಾಜಿ ಶಾಸಕರಾದ ಶ್ರೀನಿವಾಸ್‌, ಟಿ.ವಿ. ಶಿವಶಂಕರಪ್ಪ, ಕುರುಬರ ಸಂಘದ ಕಾರ್ಯದರ್ಶಿ ಶಾಂತೇಗೌಡ, ಕೆ.ಎಂ. ಕೆಂಪರಾಜು, ರೇಖಾಹುಲಿಯಪ್ಪಗೌಡ, ಬಿ.ಎಲ್‌.ಶಂಕರ್‌, ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌.ವಿಜಯ್‌ಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next