Advertisement

ಅಧಿಕಾರಿಗಳು ರೈತರ ಹಿತ ಕಾಪಾಡಲಿ

03:15 PM Aug 18, 2017 | Team Udayavani |

ಚಿತ್ರದುರ್ಗ: ರೈತರು ಈ ದೇಶದ ಆಸ್ತಿಯಾಗಿದ್ದು ಅವರ ಶೋಷಣೆ ನಿಲ್ಲಬೇಕು. ಆದ್ದರಿಂದ ಎಲ್ಲ ಅಧಿಕಾರಿಗಳು ರೈತರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ತಾಕೀತು ಮಾಡಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸರ್ಕಾರದ ಯಾವ ಯೋಜನೆಗಳೂ ರೈತರಿಗೆ ದಕ್ಕುತ್ತಿಲ್ಲ. ಎಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಕೃತಿ ವಿಕೋಪ, ಬರ, ಮಳೆ, ಬೆಳೆ ಹಾನಿ, ಜೊತೆಗೆ ಅಧಿಕಾರಿಗಳ ಶೋಷಣೆ ನಡೆಯುತ್ತಿದೆ. ಎಲ್ಲದಕ್ಕೂ ಕಮಿಷನ್‌ ಪಡೆಯುವ ದಂಧೆಯಿಂದಾಗಿ ರೈತರ ಏಳ್ಗೆ
ಆಗುತ್ತಿಲ್ಲ ಎಂದರು. ಹನಿ ನೀರಾವರಿ ಪದ್ಧತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಣದ ಹೊಳೆಯನ್ನೇ ಹರಿಸಿವೆ. ಹಸಿರುಮನೆ, ಪ್ಯಾಕ್‌ಹೌಸ್‌,
ಪಾಲಿಹೌಸ್‌ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಈ ಯೋಜನೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗುಣಮಟ್ಟದ ಕಾಮಗಾರಿಯನ್ನು ಏಜೆನ್ಸಿಗಳು ರೈತರಿಗೆ ಮಾಡಿಕೊಟ್ಟಿವೆಯೇ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಬಿಲ್‌ ಪಾವತಿ ಮಾಡಬೇಕು. ಆದರೆ ಅಧಿ ಕಾರಿಗಳು ಏಜೆನ್ಸಿಗಳ ಜೊತೆ ಕೈಜೋಡಿಸಿ ಬಿಲ್‌ ಪಾವತಿ ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಗುಡುಗಿದರು. 

ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಸಚಿವರ ಮಾತಿಗೆ ಧ್ವನಿಗೂಡಿಸಿದರು. ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಧಿಕ್ಕರಿಸಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಕ್ರಿಯಾ ಯೋಜನೆ
ಸಿದ್ಧಪಡಿಸುವ ಸಂದರ್ಭದಲ್ಲಿ ಸಂಸದರ ಗಮನಕ್ಕೆ ತಂದು ಒಪ್ಪಿಗೆ ಪಡೆಯಲಾಗಿದೆಯೇ ಎಂಬುದನ್ನು ತಿಳಿಸಬೇಕು ಎಂದು ಪಟ್ಟು ಹಿಡಿದರು. ಮನಸ್ಸಿಗೆ ಬಂದಂತೆ ಕ್ರಿಯಾಯೋಜನೆ ತಯಾರಿಸದೆ ಅರ್ಹ ರೈತರಿಗೆ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕು ಎಂದರು.

ಜಿಪಂ ಅಧೀನದ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದ ಕಾರ್ಯ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಬಿ.ಜಿ. ಗೋವಿಂದಪ್ಪ, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಆದರೆ ಕಮೀಷನ್‌ ಹಾವಳಿ ಮಿತಿ ಮೀರಿ ಹೋಗಿದೆ. ಮಧ್ಯವರ್ತಿಗಳ ಮೂಲಕ ಬಂದರೆ ಕೆಲಸ ಸಲೀಸಾಗಿ ಆಗುತ್ತದೆ ಎಂದು ಆರೋಪಿಸಿದರು. ಒಂದು ಕ್ರಿಯಾ ಯೋಜನೆಯ ಪ್ಲಾನ್‌, ಅಂದಾಜು ವೆಚ್ಚಕ್ಕೆ ಅನುಮೋದನೆ ಪಡೆಯಬೇಕಾದರೆ, ಬಿಲ್‌ ಬರೆಯಬೇಕಾದರೆ ಲಂಚ ಕೊಡಬೇಕು. ಲಂಚವಿಲ್ಲದೆ ಯಾವುದೇ ಕೆಲಸ ಸುಲಭವಾಗಿ ಆಗುವುದಿಲ್ಲ, ನಿಮ್ಮೆಲ್ಲ ವ್ಯವಹಾರವನ್ನೂ ಬಿಚ್ಚಿಡುತ್ತೇನೆ ಎಂದು
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಕಮಿಷನ್‌ ದಂಧೆ ಮಾಡುವಂತಹ ಅಧಿಕಾರಿಯನ್ನು ಕೂಡಲೇ ಬದಲಾಯಿಸುವಂತೆ ಆರ್‌ಡಿಪಿಆರ್‌ ಇಲಾಖೆ ಇಂಜಿನಿಯರ್‌ಗೆ ಸಚಿವ ಆಂಜನೇಯ ಸೂಚನೆ ನೀಡಿದರು.

ಈಗಾಗಲೇ ಅಂತಹ ಅಧಿಕಾರಿಯನ್ನು ಬದಲಾವಣೆ ಮಾಡಿರುವುದಾಗಿ ಇಲಾಖೆಯ ಇಇ ತಿಳಿಸಿದರು. ಸಾಮಾಜಿಕ ಅರಣ್ಯ ಇಲಾಖೆ ಅ ಕಾರಿಗಳು ಬರೀ ಸುಳ್ಳು ಮಾಹಿತಿ ನೀಡುತ್ತಾರೆ. ಅವರು ಇಲ್ಲಿಯ ತನಕ ನೀಡಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತ ದೇಶ ಸಂಪೂರ್ಣ
ಗಿಡ, ಮರಗಳಿಂದ ತುಂಬಿ ಹೋಗಿ ಪಕ್ಕದ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಗಿಡ ಮರ ನಡೆಬಹುದಿತ್ತು ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಶಾಸಕ ಗೋವಿಂದಪ್ಪ ಗರಂ ಆದರು. 

Advertisement

ಶಾಸಕದ್ವಯರ ಮಧ್ಯೆ ಮಾತಿನ ಚಕಮಕಿ
ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮೊಳಕಾಲ್ಮೂರು ಶಾಸಕ ಎಸ್‌.ತಿಪ್ಪೇಸ್ವಾಮಿ, ಹಾಗೂ ಹೊಸದುರ್ಗ ಶಾಸಕ ಗೋವಿಂದಪ್ಪನವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ರಾಜ್ಯದಲ್ಲಿ ಬರ ಇದೆ. ಜನರಿಗೆ ನೀರಿಲ್ಲ, ದನಗಳಿಗೆ ಮೇವು ನೀರಿಲ್ಲ, ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲ, ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುತ್ತಿಲ್ಲ ಎಂದು ಶಾಸಕ ತಿಪ್ಪೇಸ್ವಾಮಿ ದೂರುಗಳ ಸುರಿಮಳೆಗೈದರು. ಇದಕ್ಕೆ ಆಕ್ಷೇಪಿಸಿದ ಶಾಸಕ ಗೋವಿಂದಪ್ಪ, ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯೊಳಗೆ ನೀರು, ಮೇವು, ಉದ್ಯೋಗ ನೀಡುತ್ತಿದೆ. ವೃಥಾ ಟೀಕೆ ಮಾಡಬಾರದು ಎಂದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾರಿಗೂ ಉದ್ಯೋಗ ನೀಡುತ್ತಿಲ್ಲವೇ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರು ಮೊಳಕಾಲ್ಮೂರು ತಾಪಂ ಇಒಗೆ ಪ್ರಶ್ನಿಸಿದರು. ಆಗ ಇಒ ತಾಲೂಕಿನ ಎಲ್ಲ ಕಡೆ ಉದ್ಯೋಗ ನೀಡುತ್ತಿದ್ದೇವೆಂದು ಹೇಳಿದರು. ಆಗ ಶಾಸಕ ತಿಪ್ಪೇಸ್ವಾಮಿ, ನಾನು ನನ್ನ ಕ್ಷೇತ್ರ ಬಗ್ಗೆಯಷ್ಟೇ ಹೇಳಿಲ್ಲ, ಇಡೀ ರಾಜ್ಯದ ಪರಿಸ್ಥಿತಿ ಬಗ್ಗೆ ಹೇಳಿದೆ ಎಂದು ವಿಷಯಕ್ಕೆ ಅಂತ್ಯ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next