ಶ್ರೀನಗರ : ಕಾಶ್ಮೀರೀ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಗೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಉನ್ನತ ಲಷ್ಕರ್ ಎ ತಯ್ಯಬ ಉಗ್ರ ಮೊಹಮ್ಮದ್ ನವೀದ್ ಜಟ್ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರು ಇಂದು ಬುಧವಾರ ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಆದರೆ ಅಧಿಕಾರಿಗಳು ಈ ವಿಷಯವನ್ನು ಈಗಿನ್ನೂ ದೃಢೀಕರಿಸಬೇಕಾಗಿದೆ.
ಜಮ್ಮು ಕಾಶ್ಮೀರದ ಬಡಗಾಂವ್ ಜಿಲ್ಲೆಯ ಛಾತೇರ್‌ಗಾಂವ್ ನಲ್ಲಿ ಇಂದು ಬುಧವಾರ ನಸುಕಿನ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿತ್ತು.
ತಾಜಾ ವರದಿಗಳ ಪ್ರಕಾರ ಉಗ್ರರು ಈಗಲೂ ಈ ಪ್ರದೇಶದ ಮನೆಯೊಂದರಲ್ಲಿ ಅಡಗಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಉಗ್ರ ನವೀದ್ ಜಟ್ ಈ ವರ್ಷದ ಆದಿಯಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಆ ಬಳಿಕ ಆತ ಭದ್ರತಾ ಪಡೆಗಳು ಮತ್ತು ಪೌರರ ಮೇಲಿನ ದಾಳಿಗಳಲ್ಲಿ ಶಾಮೀಲಾಗಿದ್ದ. ಈ ವರ್ಷ ಆಗಸ್ಟ್ ನಲ್ಲಿ ಆತ ಶೋಪಿಯಾನ್ ನಲ್ಲಿ ಉಗ್ರನೋರ್ವನ ಅಂತ್ಯ ಸಂಸ್ಕಾರದ ವೇಳೆ ಕಾಣಿಸಿಕೊಂಡಿದ್ದ.
ಪಾಕಿಸ್ಥಾನದ ಮುಲ್ತಾನ್‌ನ ನಿವಾಸಿಯಾಗಿರುವ ನವೀದ್ ಜಟ್ ನನ್ನು 2014ರ ಜೂನ್‌ನಲ್ಲಿ ಕುಲಗಾಂವ್ ನ ಯಾರಿಪೋರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ವರ್ಷ ಫೆ.6ರಂದು ಆತ ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ (ಎಸ್‌ಎಂಎಚ್‌ಎಸ್) ಆಸ್ಪತ್ರೆಯಿಂದ ನಾಟಕೀಯವಾಗಿ ಪರಾರಿಯಾಗಿದ್ದ. ಈತನನ್ನು ಬಿಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಈತನ ಇಬ್ಬರು ಸಹಚರರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು.