ಹುಣಸೂರು: ವಿದ್ಯಾರ್ಥಿಗಳು ಮೌಡ್ಯದಿಂದ ದೂರವಿರಬೇಕು, ಸಾಮರಸ್ಯದ ಬದುಕನ್ನು ಕಾಣಬೇಕೇ ಹೊರತು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಲಕ್ಷ್ಮೀ ಸೀತಾಪುರ ಸೂಚಿಸಿದರು.
ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಗ್ರಾಮೀಣ ಜನರಲ್ಲಿ ಅಕ್ಷರ ಜ್ಞಾನವಿಲ್ಲದಿದ್ದ ವೇಳೆಯೂ ಅವರ ಭಾವನೆ-ಚಿಂತನೆಗಳು ಅಕ್ಷರ ಜ್ಞಾನ ಹೊಂದಿರುವವರಿಗಿಂತಲೂ ಹೆಚ್ಚಿನ ತಿಳಿವಳಿಕೆ ಇರುವುದು ದೊಡ್ಡ ಆಸ್ತಿ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ, ಪರಂಪರೆ ಶ್ರೀಮಂತವಾದುದು, ಇಂತಹ ನಾಡಿನಲ್ಲಿ ಗ್ರಾಮೀಣ ಸಂಸ್ಕೃತಿಯನ್ನೊಳಗೊಂಡ ಶಿಕ್ಷಣವನ್ನು ಸಮೀಕರಣಗೊಳಿಸುವುದರಿಂದ ಹಾಗೂ ಎಲ್ಲಾ ಸ್ಪರ್ಧೆಗಳಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬೌದ್ಧಿಕ ಶಕ್ತಿ ವೃದ್ಧಿಗೊಳ್ಳಲಿದೆ ಎಂದು ಹೇಳಿದರು.
ರೂಸಾದಿಂದ 2 ಕೋಟಿ ಅನುದಾನ: ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಸಿಗಲಿ. ನ್ಯಾಕ್ ಬಿ ಮಾನ್ಯತೆ ಪಡೆದಿದ್ದು, ರೂಸಾವತಿಯಿಂದ 2 ಕೋಟಿರೂ ಅನುದಾನ ಬಂದಿದ್ದು, ಶೀಘ್ರ ಮೊದಲ ಅಂತಸ್ತು ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ನಾಲ್ವರಿಗೆ ರತ್ನಮ್ಮ ಸುವರ್ಣ ಪ್ರಶಸ್ತಿ: ಇದೇ ವೇಳೆ ಶಾಸಕರು ಪ್ರತಿವರ್ಷ ಸರ್ಕಾರಿ ಪದವಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ತಮ್ಮ ತಾಯಿ ರತ್ನಮ್ಮ ಹೆಸರಿನಲ್ಲಿ ಕೊಡಮಾಡುವ ಸುವರ್ಣ ಪ್ರಶಸ್ತಿಗೆ ಭಾಜನರಾದ ಮಹಿಳಾ ಕಾಲೇಜಿನ ದೀಪಿಕಾ(ಕಲಾ), ವರ್ಷಾ.ಎಚ್.ಎನ್(ವಾಣಿಜ್ಯ), ಹೇಮಲತಾ.ಪಿ(ಬಿ.ಬಿ.ಎಂ) ಹಾಗೂ ಡಿ.ಡಿ.ಅರಸ್ ಕಾಲೇಜಿನ ರೇಖಾ.ಎಲ್.ಎಸ್(ಬಿ.ಎಸ್.ಸಿ) ಅವರಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಶಾಸಕ ಮಂಜುನಾಥ್ ವಿತರಿಸಿದರು.
ಸಭೆಯಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಎಸ್.ನಾಗಣ್ಣ, ಕ್ರೀಡೆ ಮತ್ತು ಎನ್‌ಎಸ್‌ಎಸ್ ಸಂಚಾಲಕ ಕೆ.ಎಸ್.ಭಾಸ್ಕರ್ ಮಾಹಿತಿ ನೀಡಿದರು. ಪ್ರಾಚಾರ್ಯ ಜ್ಞಾನಪ್ರಕಾಶ್, ಐಕ್ಯೂಎಸಿ ಸಂಚಾಲಕ ಪುಟ್ಟಶೆಟ್ಟಿ, ಸಿಡಿಸಿ ಸದಸ್ಯರಾದ ಗೋವಿಂದರಾಜಗುಪ್ತ, ಷಹಜಹಾನ್, ವಿಜಯಕರೀಗೌಡ, ಈಶ್ವರ್ ಮತ್ತಿತರರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.