ಹಿರೇಕೆರೂರ: ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ತಹಶೀಲ್ದಾರ್ ಕೆ.ಎ.ಉಮಾ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ನೀಡಿದ ಡೆಸ್ಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಬಹು ಅಮೂಲ್ಯ. ಸಮಯ ವ್ಯರ್ಥ ಮಾಡದೇ ಸದಾ ವ್ಯಾಸಂಗದತ್ತ ಗಮನ ಹರಿಸಬೇಕು. ಅಚಲವಾದ ಗುರಿ ಹೊಂದಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಸಾಧನೆಗೈದು ದೇಶಕ್ಕೆ ಕೀರ್ತಿ ತರಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಅನೇಕ ಸವಲತ್ತುಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಆಸ್ತಿಯಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೈದ್ಧಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಜಿಲ್ಲಾ ಸಂಯೋಜಕ ನಾಗರಾಜ ಶೆಟ್ಟಿ ಮಾತನಾಡಿ, ಇಂದಿನ ದಿನಮಾನದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಪ್ರಧಾನ್ಯತೆ ನೀಡಬೇಕಾಗಿದೆ. ಶಿಕ್ಷಣ ದೊರೆತರೆ ಸಮಾಜದ ಸಬಲೀಕರಣವಾಗಲು ಸಾಧ್ಯ. ನಮ್ಮ ಸಂಘ ಮಹಿಳಾ ಸಂಘಗಳ ಮೂಲಕ ಸಮಾಜದ ಬಡತನ ನೀಗಿಸುವುದು ನಮ್ಮ ಗುರಿಯಾಗಿದೆ ಎಂದರು. ಮುಖ್ಯಶಿಕ್ಷಕ ಎನ್.ಸುರೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ರಮೇಶ ಕೋಡಿಹಳ್ಳಿ, ಕವಿತಾ ಹಾರ್ನಳ್ಳಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿ ಕಾರಿ ಗಣಪತಿ ನಾಯಕ, ಕಿರಣ ಎಂ.ಡಿ., ಶಂಕ್ರಪ್ಪ ಅಂಗಡಿ, ಕಲ್ಲಪ್ಪ ಬನ್ನಿಹಟ್ಟಿ, ಮಾರುತಿ ಸುಣಗಾರ, ಮಮತಾ ಅಂಗಡಿ ಸೇರಿದಂತೆ ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.