ಕೊಪ್ಪಳ: ಭಾರತವು ವೈವಿದ್ಯಮಯ ದೇಶವಾಗಿದೆ. ಹಿರಿಯರನ್ನು ಗೌರವಿಸುವ, ಪ್ರೀತಿಸುವ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ. ನಾವು ಎಲ್ಲರ ಮಧ್ಯೆ ಒಂದಾಗಿ ಬದುಕು ಸಾಗಿಸುತ್ತಿರುವುದು ಸಂತಸ ತರಿಸಿದೆ. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲಿ ಎಂದು ಹುಬ್ಬಳ್ಳಿ ಕಾನೂನು ವಿಶ್ವದ್ಯಾಲಯದ ಉಪ ಕುಲಪತಿ ಸಿ. ಬಸವರಾಜು ಅವರು ಹೇಳಿದರು.
ನಗರದ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತಾಡಿದರು.ನಮ್ಮನ್ನು ಸ್ವಾಗತಿಸುವುದು, ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ.ವೈವಿದ್ಯಮಯದಿಂದ ಕೂಡಿರುವ ದೇಶದಲ್ಲಿ ಬದುಕುತ್ತಿದ್ದೇವೆ. ಎಲ್ಲರ ಮಧ್ಯೆ ಒಂದಾಗಿ ಬದುಕುತ್ತಿರುವುದು ಸಂತಸ ತರಿಸಿದೆ.
ವಿದ್ಯಾರ್ಥಿಯ ಜೀವನ ಶ್ರೇಷ್ಠವಾದದ್ದು, ವ್ಯರ್ಥ ಮಾಡಬೇಡಿ. ಜೀವನದಲ್ಲಿ ಒಂದು ಬಾರಿ ಮಾತ್ರ ಅವಕಾಶ ಸಿಗುತ್ತದೆ. ಶ್ರೇಷ್ಠವಾದ ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ. ಮುಂದಿನ ಜೀವನದಲ್ಲಿ ಸುಖವಾಗಿ ಬಾಳಬಹುದು. ಉತ್ತಮ ಭವಿಷ್ಯಕ್ಕೆ ಶಿಕ್ಷಣದ ಮೋರೆ ಹೋಗಿದ್ದೇವೆ. ಶಿಕ್ಷಣದಿಂದ ಸಮಾಜದ ಪ್ರಗತಿ ಸಾಧ್ಯ ಎಂದರು.
ದೇಶದಲ್ಲಿ ಉತ್ಕೃಷ್ಟ ಶಿಕ್ಷಕರನ್ನು ತಯಾರಿ ಮಾಡದೇ ಹೋದರೆ ಸಮಾಜ ಹಾಳಾಗುತ್ತದೆ. ಕಾನೂನು ಕ್ಷೇತ್ರ ಸಮೃದ್ಧಿಯಾಗಿ ಬೆಳೆಯಲು ಉತ್ತಮ ಶಿಕ್ಷಕರೂ ಬೇಕು. ಬೇರೆ ಬೇರೆ ವಿಭಾಗಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಅಭಿಲಾಷೆ ಹೊಂದಿರುವುದು ಖುಷಿಯ ವಿಚಾರ. ವಕೀಲ ಪದವಿ ಆಯ್ಕೆ ಮಾಡಿಕೊಂಡು ಬರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ಗುಣಾತ್ಮಕ ಶಿಕ್ಷಣ ನೀಡದೇ ಹೋದರೇ ಶಿಕ್ಷಣದ ಗುಣಮಟ್ಟ ಕಳೆದುಕೊಳ್ಳುತ್ತದೆ. ಎಲ್ಲಾ ಕ್ಷೇತ್ರವನ್ನು ಕಾಪಾಡುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ ಎಂಬುದನ್ನು ಯಾರೂ ಮರೆಯುವಂತಿಲ್ಲ.
ಸಂವಿಧಾನದ ಆಶಯಗಳಿಗೆ ಗೌರವ ಕೊಡಬೇಕು. ಉತ್ತಮ ವಕೀಲರಾಗಲು ದೀರ್ಘ ಅಧ್ಯಯನದ ಜತೆಗೆ ಭಾಷೆ ಮುಖ್ಯ ಎಂದರು. ಪೋಕ್ಸೊ ನ್ಯಾಯಾಲಯದ ತ್ವರಿತ ನ್ಯಾಯಾಧೀಶರಾದ ಡಿ.ಕೆ. ಕುಮಾರ ಮಾತನಾಡಿ, ವಕೀಲಿಕೆ ವೃತ್ತಿಯಲ್ಲಿ ಮಾನವೀಯತೆ ಮುಖ್ಯ. ಹೆಚ್ಚು ಕಲಿಕೆಯಿಂದ ವಿಧೇಯತೆ ಬರಬೇಕು. ನಿರಂತರ ಅಧ್ಯಯನದ ಅವಶ್ಯಕತೆ ಇದೆ ಎಂದರು.ಕಾಲೇಜಿನ ಕಾರ್ಯದರ್ಶಿ ರಾಧಾಕೃಷ್ಣ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಕೊಪ್ಪಳ್ಳ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಹನಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಐ.ಎಸ್. ಇಂಗಳಳ್ಳಿ, ಧಾರವಾಡದ ಬಿ.ಇಡಿ ಕಾಲೇಜು ಪ್ರಾಚಾರ್ಯ ಅಡಕಿ, ಕಾಲೇಜಿನ ಜಿ.ಎಸ್. ಸುಜಾತಾ ಬಣಜಿಗೇರ್, ಉಪನ್ಯಾಸಕರಾದ ಉಷಾದೇವಿ ಹಿರೇಮಠ, ಬಸವರಾಜ, ಕೆ. ಶೇಷಾದ್ರಿ, ಶಿಲ್ಪಾ ಬಿರಾದಾರ, ಗ್ರಂಥಪಾಲಕ ರವಿ ಬಡಿಗೇರ್, ಜಿಮಖಾನಾ ಕಾರ್ಯಚಟುವಟಿಕೆಯ ಬಸವರಾಜ ಅಳ್ಳಳ್ಳಿ, ಕಾಲೇಜಿನ ಸಿಬ್ಬಂದಿ ರಜಿಯಾ ಬೇಗಂ, ಸುಜಾತಾ ಕದ್ರಳ್ಳಿ, ಜಿ.ಎಸ್. ಹಳ್ಳಿಕೇರಿ, ಎಚ್.ಡಿ.ಬೇಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.