Advertisement

ಸೆಸ್ಕ್ ವ್ಯಾಪ್ತಿಯಲ್ಲಿ ಸೋಲಾರ್‌ ಬಳಕೆ ಕಡ್ಡಾಯವಾಗಲಿ

09:09 PM Feb 15, 2020 | Lakshmi GovindaRaj |

ಚನ್ನರಾಯಪಟ್ಟಣ: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಮಗದ ವ್ಯಾಪ್ತಿಯ ಎಲ್ಲಾ ಪಟ್ಟಣಗಳಲ್ಲಿ ಸೋಲಾರ್‌ ಬಳಕೆ ಕಡ್ಡಾಯ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸೂಚನೆ ನೀಡಿದರು.

Advertisement

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಹಾಗೂ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್‌ ಸುರಕ್ಷಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣಗಳಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೆ ಸೋಲಾರ್‌ ಅಳವಡಿಸಿಕೊಂಡರೆ ಮಾತ್ರ ವಿದ್ಯುತ್‌ ಪಡೆಯಲು ಅನುಮತಿ ನೀಡುವುದಾಗಿ ಸೂಚಿಸಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಆರ್‌ಸಿಸಿ ಮನೆ ನಿರ್ಮಿಸಿಕೊಳ್ಳುತ್ತಾರೆ ಅವರಿಗೂ ಸೋಲರ್‌ ಮಹತ್ವ ತಿಳಿಸಬೇಕು. ಡಿ.ಕೆ.ಶಿವಕುಮಾರ್‌ ಅವರು ಇಂಧನ ಮಂತ್ರಿಯಾಗಿದ್ದಾಗ ವಿದ್ಯುತ್‌ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು. ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಮೂರು ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದೆ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದಿಂದ ಬಿಲ್‌ ಪಾವತಿಸಲು ಮನವಿ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಎನ್‌.ಬಾಲಕೃಷ್ಣ , ಪಟ್ಟಣದಲ್ಲಿ ಜಾಗೃತಿ ಮೂಡಿಸಿದರೆ ಸಾಲದು ಪ್ರತಿ ಹಳ್ಳಿಯಲ್ಲಯೂ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಇಲಾಖೆ ಮೇಲಧಿಕಾರಿಗಳು ಚಿಂತಿಸಬೇಕಿದೆ ಎಂದರು. ತಾಲೂಕಿನ ಐದು ಏತನೀರಾವರಿ ಯೋಜನೆಗಳಿಂದ ಸೆಸ್‌ಗೆ 10 ಕೋಟಿ ರೂ. ಬಿಲ್‌ ಬಾಕಿ ಇದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ವಿದ್ಯುತ್‌ ನೀಡುತ್ತಿದ್ದು, ಪವರ್‌ ಮ್ಯಾನ್‌ಗಳು ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ವಿದ್ಯುತ್‌ ಸಮಸ್ಯೆ ಉದ್ಭವವಾಗುವುದಿಲ್ಲ ಎಂದರು.

2,443 ವಿದ್ಯುತ್‌ ಪರಿವರ್ತಕ ಅಗತ್ಯ: ಅಕ್ರಮ ಸಕ್ರಮಗಳಿಗೆ ತಾಲೂಕಿಗೆ 2,443 ವಿದ್ಯುತ್‌ ಪರಿವರ್ತಕ ಅಗತ್ಯವಿದೆ. ಈಗಾಗಲೇ ಸರ್ಕಾರ 43 ಕೋಟಿ ರೂ. ಬಿಡುಗಡೆ ಮಾಡಿದೆ. ರೈತರು ಸರ್ಕಾರ ನಿಗದಿ ಮಾಡಿರುವ ಶುಲ್ಕ ಪಾವತಿ ಮಾಡಿದರೆ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಲಾಗುವುದು ತಾಲೂಕಿನ ಎಲ್ಲಾ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಒಂದು ಹಳ್ಳಿ ಇಂತಿಷ್ಟೇ ಟೀಸಿ ಎಂಬುದು ನಿಗದಿಯಾಗಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಟೀಸಿ ಅಳವಡಿಸಲಾಗುವುದು ಎಂದು ಹೇಳಿದರು.

Advertisement

ತಾಲೂಕಿನ ದಿಂಡಗೂರು, ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿ ನಿರಂತರ ಜ್ಯೋತಿ ಸಂಪರ್ಕ ನೀಡಿಲ್ಲ. ಶೀಘ್ರದಲ್ಲಿ ಸಂಪರ್ಕ ನೀಡಲು ಮುಂದಾಗುತ್ತೇವೆ. ಬೆಳಕು ಯೋಜನೆಯು ತಾಲೂಕಿನಲ್ಲಿ ಐದು ಹಳ್ಳಿಗೆ ನೀಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 54 ವಿದ್ಯುತ್‌ ಪರಿವರ್ತಕ ಹಾಕಲಾಗಿದ್ದು ಗುಣಮಟ್ಟದ ವಿದ್ಯುತ್‌ ವಿತರಣೆ ಮಾಡಲಾಗುತ್ತಿದೆ, ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ ನೀಡಲು ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಮಧ್ಯವರ್ತಿಗಳಿಗೆ ಹಣ ನೀಡಬೇಡಿ: ಸೆಸ್ಕ್ ಅಧೀಕ್ಷಕ ಅಭಿಯಂತರ ಸುಚೇತನ್‌ ಮಾತನಾಡಿ, ಇಲಾಖೆ ಹಾಗೂ ಮೇಲಧಿಕಾರಿ ಹೆಸರಿನಲ್ಲಿ ರೈತರಿಂದ ಮಧ್ಯವರ್ತಿಗಳು ಹಣ ಕೀಳುತ್ತಿರುವ ಬಗ್ಗೆ ಇಲಾಖೆ ಮಾಹಿತಿ ಬಂದಿದೆ. ರೈತರು ನೇರವಾಗಿ ಇಲಾಖೆಗೆ ಆಗಮಿಸಿ ತಮಗೆ ಅಗತ್ಯ ಇರುವ ವಿದ್ಯುತ್‌ ಪರಿವರ್ತಕ್ಕೆ ಸರ್ಕಾರ ನಿಗದಿ ಮಾಡಿರುವ ಹಣ ನೀಡಿ ರಸೀದಿ ಪಡೆದರೆ ಪರಿವರ್ತಕ ಹಾಕಲಾಗುವುದು. ನನಗೆ ಸರ್ಕಾರ ನೀಡುತ್ತಿರುವ ವೇತನವೇ ಸಕಾಗಿದೆ ಲಂಚದ ಹಣಕ್ಕೆ ಕೈಚಾಚುವುದಿಲ್ಲ ಎಂದು ಹೇಳಿದರು.

ಲಂಚ ಪಡೆಯುವ ಸಿಬ್ಬಂದಿ ವಿರುದ್ಧ ಕ್ರಮ: ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆಯಲು ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕಿನಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಲು ಸರ್ಕಾರ 43 ಕೋಟಿ ರೂ. ಬಿಡುಗಡೆ ಮಾಡಿದ್ದು ಟೆಂಡರ್‌ ಮಾಡಿದೆ. ಈ ಹಣದಲ್ಲಿ ವಿದ್ಯುತ್‌ ಪರಿವರ್ತಕ ಹಾಕಲಾಗುವುದು.

ಯಾರು ಇದಕ್ಕಾಗಿ ದಲ್ಲಾಳಿಗಳ ಮೂಲಕ ಇಲಾಖೆಗೆ ಬರುವ ಅಗತ್ಯವಿಲ ಎಂದರು. ವಿದ್ಯುತ್‌ ಗುತ್ತಿಗೆದಾರರ ಸಂಘ ಜಿಲ್ಲಾಧ್ಯಕ್ಷ ರಮೇಶ, ತಾಲೂಕು ಅಧ್ಯಕ್ಷ ಮಂಜುನಾಥ, ರಾಜ್ಯ ಸಮಿತಿ ಸದಸ್ಯ ದೇವರಾಜೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ರಘು, ಅಧಿಕಾರಿಗಳಾದ ಹೇಮಲತಾ, ಜಗದೀಶ, ಪ್ರವೀಣ, ರಂಗಸ್ವಾಮಿ, ಅಂಬಿಕಾ, ಹರೀಶ, ಮರ್ಜಕುಮಾರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next