ಸಿಂಧನೂರು: ಶಾಸಕ ಶಿವನಗೌಡ ನಾಯಕ ಅಧಿಕಾರಿಗಳ ಮೇಲೆ ದರ್ಪ ಚಲಾಯಿಸಿ, ಮಾನಸಿಕ ಕಿರಿಕಿರಿ ನೀಡುತ್ತ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದು, ಅವರು ಬಹಿರಂಗ ಕ್ಷಮೆಯಾಚಿಸಬೇಕು.
ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸೋಮವಾರ ಸಚಿವ ವೆಂಕಟರಾವ್ ನಾಡಗೌಡರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಸೋಮವಾರ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವರಿಗೆ ಮನವಿ ಸಲ್ಲಿಸಿದರು. ಶಾಸಕರು ಅಧಿಕಾರಿಗಳ ಮೇಲೆ ದರ್ಪ ಚಲಾಯಿಸಿ, ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಕಿರಿಕಿರಿ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಈ ರೀತಿ ಮಾಡುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಿ ಶಾಸಕರಿಗೆ ಬಹಿರಂಗ ಕ್ಷಮೆಯಾಚನೆಗೆ ಹೇಳಬೇಕು. ಇಲ್ಲವಾದರೆ ಶಾಸಕರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ವೆಂಕಟರಾವ್ ನಾಡಗೌಡ, ಯಾರೇ ಆಗಲಿ ತಮ್ಮ ತಮ್ಮ ಸ್ಥಾನಕ್ಕೆ ಗೌರವ ಸೂಚಿಸುವಂತೆ ಮಾತನಾಡಬೇಕು. ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ವಾಭಿಮಾನ ಇರುತ್ತದೆ. ಈ ಬಗ್ಗೆ ದೂರುಗಳು ಬಂದಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜೊತೆಗೂಡಿ ಕೆಲಸ ಮಾಡಿದಾಗ ಮಾತ್ರ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯ. ಶಾಸಕ ಶಿವನಗೌಡ ನಾಯಕ ಅವರ ಮಾತಿನಿಂದ ಅಧಿಕಾರಿಗಳು ಕುಗ್ಗುವ ಅವಶ್ಯಕತೆ ಇಲ್ಲ. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕು ಅದನ್ನು ಮಾತ್ರ ಮಾಡಿ ಕೆಲಸಕ್ಕೆ ಗೌರವ ಕೊಡಿ. ಯಾವುದೇ ಪ್ರತಿಭಟನೆಗೆ ಮುಂದಾಗದೆ ಕೆಲಸ ಮಾಡಿ.
ಕೂಡಲೇ ವಿಷಯಕ್ಕೆ ನಾಂದಿ ಹಾಡುವ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಬಿ.ಶರತ್, ಜಿಪಂ ಸಿಇಒ ನಲಿನ್ ಅತುಲ್, ಎಸ್ಪಿ ಡಿ. ಕಿಶೋರಬಾಬು ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.