Advertisement

ತ್ವರಿತಗತಿಯಲ್ಲಿ ಮಳೆ ಪರಿಹಾರ, ರಕ್ಷಣ ಕಾರ್ಯ ನಡೆಯಲಿ

11:59 PM Nov 17, 2021 | Team Udayavani |

ರಾಜ್ಯಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮನೆ ಕುಸಿತ, ಬೆಳೆ ನಾಶದಂಥ ಘಟನೆಗಳು ವರದಿಯಾಗಿವೆ. ಮುಂಗಾರು ಕಳೆದು, ಹಿಂಗಾರು ಆರಂಭವಾದ ಅನಂತರ ಈ ಪ್ರಮಾಣದ ಮಳೆ ಸುರಿಯುತ್ತಿದ್ದು, ಜನರಲ್ಲಿ ಆತಂಕವೂ ಮನೆ ಮಾಡಿದೆ. ಕೈಗೆ ಬಂದ ಫ‌ಸಲು ಮಳೆಯಿಂದ ನಾಶವಾಗಿದ್ದು, ರೈತರೂ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

Advertisement

ಕಳೆದ 2 ತಿಂಗಳಲ್ಲಿ ಒಟ್ಟಾರೆಯಾಗಿ 4 ಲಕ್ಷ  ಹೆಕ್ಟೇರ್‌ ಬೆಳೆ ನಾಶವಾಗಿದೆ ಎಂದು ಸರಕಾರದ ಅಂಕಿ ಅಂಶಗಳೇ ಹೇಳಿವೆ. ಸೆಪ್ಟಂಬರ್‌ನಲ್ಲಿ 3.47 ಲಕ್ಷ ಹೆಕ್ಟೇರ್‌, ಅಕ್ಟೋಬರ್‌ನಲ್ಲಿ 58 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ಇದ್ದ ಬೆಳೆ ಮಳೆಯಿಂದಾಗಿ ನಾಶವಾಗಿದೆ. ಅದರಲ್ಲೂ ಭತ್ತ, ಕಬ್ಬು, ಉದ್ದು, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಬೆಳೆ ಹಾಗೂ ಟೊಮೆಟೋ, ಈರುಳ್ಳಿಯಂಥ ತರಕಾರಿ ಬೆಳೆಗಳೂ ನಾಶವಾಗಿವೆ.

ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ರೈತನ ಆದಾಯಕ್ಕೆ ಕಲ್ಲು ಹಾಕಿತ್ತು. ಈ ವರ್ಷ ಕೊರೊನಾ ಅಪಾಯದಿಂದ ದೂರವಾಗಿದ್ದೇವೆ ಎಂದು ಭಾವಿಸಿಕೊಳ್ಳುವ ಹೊತ್ತಿಗೇ ಈ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಮಾತ್ರ ಎಲ್ಲರಲ್ಲೂ ಆತಂಕ ತಂದಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇನ್ನೂ ನಾಲ್ಕೈದು ದಿನಗಳ ವರೆಗೆ ರಾಜ್ಯದ ಹಲವೆಡೆ ಇದೇ ರೀತಿಯಲ್ಲೇ ಮಳೆ ಸುರಿಯಲಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬುಧವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಈ ಬಗ್ಗೆ ಹೇಳಿದ್ದಾರೆ.

ಸಮರೋಪಾದಿಯಲ್ಲಿ ರಕ್ಷಣ ಕಾರ್ಯಕ್ಕೂ ಸಿದ್ಧರಾಗುವಂತೆ ಸೂಚನೆ ನೀಡಿದ್ದಾರೆ. ಬಂಗಾಲಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದಾಗಿ ಈ ಪ್ರಮಾಣದ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾಕಷ್ಟು ಹಾನಿಯಾಗಿದೆ. ಎನ್‌ಡಿಆರ್‌ಎಫ್ಗೆ ರಕ್ಷಣ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದೇವೆ ಎಂದೂ ಸಿಎಂ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಜಮ್ಮು- ಕಾಶ್ಮೀರ: ಕುಲ್ಗಾಮ್‌ನಲ್ಲಿ ಐವರು ಉಗ್ರರ ಹತ್ಯೆ

ಮಳೆ ಸುರಿಯುತ್ತಿರುವ ನಡುವೆಯೇ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿರುವುದು ಸ್ವಾಗತಾರ್ಹವೇ. ಆದರೆ, ಅತ್ತ ರೈತ ಕೈಗೆ ಬಂದ ಬೆಳೆ ಹಾಳಾಗಿರುವುದರಿಂದ ನೊಂದಿದ್ದಾನೆ. ಮೊದಲಿಗೆ ಆತನ ಕಣ್ಣೀರು ಒರೆಸುವ ಕೆಲಸವಾಗಬೇಕು. ಅಧಿಕಾರಿಗಳು ನಾನಾ ಕಾರಣಗಳನ್ನು ನೀಡಿ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ಯಾವುದೇ ತಡ ಮಾಡಬಾರದು. ಈ ಸಂಬಂಧ ರಾಜ್ಯ ಸರಕಾರವೂ ಮುನ್ನೆಚ್ಚರಿಕೆ ವಹಿಸಿಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಎಲ್ಲೆಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆಯೋ ಅಲ್ಲಿನ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಹಾರ ಬಿಡುಗಡೆ ಮಾಡಬೇಕು.

ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಗಾಗಿ ರೈತರ ಜಮೀನುಗಳಿಗೆ ಹೋಗುತ್ತಲೇ ಇಲ್ಲ ಎಂಬ ಮಾಹಿತಿಗಳೂ ಇವೆ. ರೈತರೇ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯತ್‌ಗಳಿಗೆ ಹೋಗಿ ತಮ್ಮ ಜಮೀನಿನಲ್ಲಿ ಬೆಳೆಹಾನಿಯಾಗಿದೆ ಎಂದು ದೂರು ಕೊಟ್ಟರೆ ಮಾತ್ರ ಅಧಿಕಾರಿಗಳು ಬರುತ್ತಾರೆ. ಇಲ್ಲದೇ ಹೋದರೆ, ತಮ್ಮ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ ಎಂದು ಗೊತ್ತಿದ್ದರೂ ಅಲ್ಲಿಗೆ ಹೋಗಿ ತಾವೇ ಪರಿಶೀಲನೆ ಮಾಡುವುದಿಲ್ಲ ಎಂಬ ದೂರುಗಳೂ ಇವೆ. ಹೀಗಾಗಿ ರಾಜ್ಯ ಸರಕಾರ ಇಂಥ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಬೇಕಿರುವುದು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next