ಹೇ ಹುಡುಗಾ! ಒಂದೇ ಒಂದು ಮಾತು; ನಂಗೊತ್ತು, ಇದನ್ನೆಲ್ಲಾ ಓದೋದಕ್ಕೆ ನಿಂಗೆ ತಾಳ್ಮೆ ಇಲ್ಲ ಅಂತ. ಆದ್ರೂ ನಿನಗೋಸ್ಕರ ಈ ಪತ್ರ ಬರೀತಾ ಇದೀನಿ. ಪ್ಲೀಸ್ ಓದು… ನಿನಗೆ ಎಷ್ಟೊಂದೆಲ್ಲಾ ಹೇಳಬೇಕು, ನಿನ್ನೊಂದಿಗೆ ಹಗಲೆಲ್ಲಾ ಪಟಪಟ ಅಂತ ಮಾತಾಡಬೇಕು, ನಿನ್ನ ಕೋಪ ನೋಡಿ ಮೌನ ತಾಳಬೇಕು, ನಿನ್ನ ತುಟಿಯಂಚಲ್ಲಿ ಕಿರುನಗೆ ನೋಡಿ ಜೋರಾಗಿ ನಗಬೇಕು… ಇನ್ನೂ ಏನೇನೋ ಹುಚ್ಚು ಆಸೆಗಳನ್ನು ಮನದ ತುಂಬಾ ತುಂಬಿಕೊಂಡಿದ್ದೇನೆ. ಇವೆಲ್ಲವನ್ನೂ ನಿನ್ನ ಮುಂದೆ ನಿಂತು ಹೇಳ್ಬೇಕು ಅನ್ನಿಸುತ್ತೆ. ಆದ್ರೆ ಎಲ್ಲರೊಡನೆ ಅಳುಕಿಲ್ಲದೆ ಮಾತಾಡೋ ನಾನು, ನಿನ್ನ ಕಂಡಾಗ ಮೂಗಿಯಾಗಬಿಡ್ತೀನಿ. ಎದೆಯ ತುಂಬಾ ಏನೋ ಕಳವಳ, ಹೆದರಿಕೆ.. ಅದರೊಡನೆ ತಿಳಿಯದ ಸಂತಸ, ನಾಚಿಕೆ ಮನೆಮಾಡಿರುತ್ತದೆ. ನಿನ್ನೊಂದಿಗೆ ಕಳೆದ ಗಂಟೆಗಳು ನನಗೆ ಮರೆಯಲಾಗದ ಕ್ಷಣಗಳು. ಯಾವಾಗಲೂ ನಿನ್ನ ಮಾತು ಕೇಳುತ್ತಲೇ ಇರೋಣ ಅನ್ನಿಸುತ್ತದೆ.
Advertisement
ಆ ಮಾತುಗಳೇ ಅಲ್ವಾ ನಿನ್ನನ್ನು ನಂಗೆ ಸಿಗೋ ಹಾಗೆ ಮಾಡಿದ್ದು. ಅದೇ ಅಲ್ವಾ ನಮ್ಮಿಬ್ಬರ ಸ್ನೇಹಕ್ಕೆ ಸೇತುವೆ ಆದದ್ದು… ನಿನ್ನೊಡನೆ ನಡೆದ ಆ ಕ್ಷಣದಲ್ಲಿ ಉರಿಬಿಸಿಲು ಕೂಡ ತಂಪಾಗಿತ್ತು. ಕಲ್ಲು ಮುಳ್ಳಿನ ಹಾದಿ ಕೂಡ ಬರಿಗಾಲಿನಲ್ಲಿ ಇದ್ದಾಗಲೂ ಮೆತ್ತನೆಯ ಹೂವಿನ ಹಾದಿಯಂತೆ ಭಾಸವಾಗಿತ್ತು.
Related Articles
ಮತ್ತೆ… ನಿನಗೆ ಏನೇನ್ ಇಷ್ಟಾನೋ ಅದೆಲ್ಲ ಹಾಗೇ ಇರಲಿ. ಆದರೆ ನಿನ್ನ ಕೆಲವೊಂದು ಇಷ್ಟಗಳ ಮೇಲೆ ಗಮನವಿರಲಿ. ಕೆಟ್ಟದ್ದನ್ನು ಮಾಡುವ ಮುಂಚೆ ಹತ್ತು ಸಲ ಯೋಚಿಸು. ನಿನಗಾಗಿ ಒಂದು ಜೀವ ಇರುತ್ತೆ ಅಂತ .ಅತಿಯಾಗಿ ಯಾವುದನ್ನೂ ಮಾಡಬೇಡ ಎಲ್ಲವೂ ಮಿತವಾಗಿರಲಿ. ಯಾವಾಗಲೂ ಸಿಡುಕು ಮೂತಿ ಸಿದ್ದಪ್ಪನ ತರಹ ಇರೋದನ್ನ ಬಿಟ್ಟು ಸ್ವಲ್ಪ ನಗು ಮಾರಾಯ, ನಿನ್ನ ಗಂಟೇನೂ ಹೋಗಲ್ಲ. ನಗ್ತಿàಯಾ ಅಲ್ವಾ? ಪ್ಲೀಸ್ ಕಣೋ… ನನಗೋಸ್ಕರ ನಗು ನೋಡೋಣ ಒಮ್ಮೆ,
Advertisement
ಎಲ್ಲಿ ಒಂದು ಸಲ ನಗು… ಹಾಂ ಹೀಗೆ. ಯಾವಾಗಲೂ ಹೀಗೆ ನಗ್ತಾ ಇರು.. ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಅಂದ್ರೆ, ಅದೇ ಏರ್‌ಸೆಲ್ ನಂಬರ್‌ಗೆ ಕಾಲ್ ಮಾಡು. ಎಲ್ಲಾ ಮರೆತು ನಿನ್ನ ಕರೆಗಾಗಿ ಕಾಯ್ತಾ ಇದ್ದೇನೆ. ಇಂತಿ ನಿನ್ನ ಮುದ್ದು ಪೆದ್ದು ಗೆಳತಿ… ಅಪೂರ್ವ ನಾಗರಾಜ್