Advertisement

ವೈದ್ಯ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರು ಬರಲಿ

01:09 AM Jul 01, 2019 | Team Udayavani |

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಮಾತೃ ವಾತ್ಸಲ್ಯ ಕಾಣಬೇಕೆಂದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು ಎಂದು ರಾಜ್ಯಪಾಲ ವಜುಭಾಯ್‌ ವಾಲಾ ಅಭಿಪ್ರಾಯ ಪಟ್ಟರು.

Advertisement

ಜೆಪಿ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆಸ್ಟರ್‌ ಆರ್‌.ವಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚೆಚ್ಚು ವೈದ್ಯಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಾಗ ಆಸ್ಪತ್ರೆಗಳಲ್ಲಿ ಇಡೀ ವಾತಾವರಣ ಮಾತೃ ವಾತ್ಸಲ್ಯವಾಗಿ ರೂಪಾಂತರವಾಗುತ್ತದೆ ಎಂದು ಹೇಳಿದರು.

ಮಹಿಳೆಯರು ಈಗಾಗಲೇ ಸಶಕ್ತರಾಗಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಕೃಷಿ ಪದವಿಯಲ್ಲಿ ಸಾಧನೆ ಮಾಡಿದ್ದಾರೆ. ಅವಕಾಶ ನೀಡಿದರೆ ಮಹಿಳೆಯರು ದೇಶವನ್ನು ಮತ್ತಷ್ಟು ಬೆಳಗಬಲ್ಲರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಐಟಿಬಿಟಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಿಲಿಕಾನ್‌ ಸಿಟಿ ಬೆಂಗಳೂರು, ಈಗ ವೈದ್ಯಕೀಯ ಹಬ್‌ ಆಗಿ ಬೆಳೆಯುತ್ತಿದೆ. ಉತ್ತಮ ಆರೋಗ್ಯ ಸೇವೆಗಳು ಇಲ್ಲಿ ದೊರಕುತ್ತಿದ್ದು ವಿದೇಶಿಯರಲ್ಲೂ ವಿಶ್ವಾಸ ಮೂಡಿಸಿದೆ.

ಇಡೀ ವಿಶ್ವ ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನತ್ತ ನೋಡುತ್ತಿದ್ದು, ಇಲ್ಲಿಯೂ ಅತ್ಯುತ್ತಮ ಸೇವೆಗಳ ಜತೆಗೆ ಉತ್ತಮ ವೈದ್ಯರಿದ್ದಾರೆ. ಹೀಗಾಗಿ ನಮ್ಮಲ್ಲಿರುವ ವೈದ್ಯಕೀಯ ಸೇವೆಯನ್ನು ಜನರು ಬಳಸಿಕೊಳ್ಳಬೇಕು ಎಂದರು.

Advertisement

ಆರೋಗ್ಯವೆ ಸಂಪತ್ತು: ಆರ್ಥಿಕವಾಗಿ ಸಬಲರಾಗಿರುವವರು ಭೂಮಿ ಮತ್ತು ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಕಡೆಗೆ ಆಲೋಚಿಸಬೇಕು. ನಮ್ಮ ಬಳಿ ಹಣ, ಕಾರು, ಬಂಗಲೆ, ಸಂಪತ್ತು ಇದ್ದರೂ, ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಇದನ್ನು ಇಡೀ ಮನುಷ್ಯ ಸಂಕುಲ ಅರಿಯಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕೂಡ ಜನರ ಆರೋಗ್ಯ ಸೇವೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳನ್ನು ಸದುಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಸಕಿ ಸೌಮ್ಯಾ ರೆಡ್ಡಿ, ಆಸ್ಟರ್‌ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಆಜಾದ್‌ ಮೂಪೆನ್‌, ಆರ್‌.ವಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಪಾಂಡುರಂಗಶೆಟ್ಟಿ, ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್‌, ಆರ್‌.ವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎ.ವಿ.ಎಸ್‌.ಮೂರ್ತಿ, ಆಸ್ಟರ್‌ ಆಸ್ಪತ್ರೆಯ ಸಿಇಒ ಡಾ.ಹರೀಶ್‌ ಪಿಳೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next