Advertisement

ಶಾಸಕರು ಪ್ರಾಮಾಣಿಕರಾಗಿದ್ರೆ ತನಿಖೆ ಮಾಡಿಸಲಿ: ತಂಗಡಗಿ

10:32 AM May 24, 2020 | mahesh |

ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 78 ಕಾಮಗಾರಿಗಳು ಬೋಗಸ್‌ ಆಗಿರುವ ವಿಚಾರದಲ್ಲಿ ಶಾಸಕ ಬಸವರಾಜ ದಡೇಸುಗೂರು ಅವರು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿಸಲಿ. ಇಲ್ಲವಾದರೆ ಜೂ.4ರಂದು ಜಿಪಂ ಕಚೇರಿ ಎದುರು ಕಾಂಗ್ರೆಸ್‌ ಮುಖಂಡರೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಕನಕಗಿರಿ ಕ್ಷೇತ್ರದಲ್ಲಿ 4 ಕೋಟಿ ರೂ. ವೆಚ್ಚದ 78 ಕಾಮಗಾರಿಗಳು ಬೋಗಸ್‌ ಆಗಿವೆ. ಬಿಲ್‌ ಎತ್ತುವಳಿ ಮಾಡಿದ್ದಾರೆಂದು ದಾಖಲೆಗಳ ಸಮೇತ ಸುದ್ದಿಗೋಷ್ಠಿ ಮಾಡಿದ್ದೆ. ಇದರಿಂದ ಎಚ್ಚೆತ್ತ ಶಾಸಕರು, ಆ ರಸ್ತೆ ಕಾಮಗಾರಿ ಆರಂಭ ಮಾಡಿದ್ದಾರೆ. ನನ್ನಲ್ಲಿ ಮೊದಲು ಕೆಲಸ ಮಾಡದೇ ಇರುವ ಹಾಗೂ ಈಗ ಕೆಲ ರಸ್ತೆ ಕಾಮಗಾರಿ ಮಾಡುತ್ತಿರುವ ಫೋಟೋ, ವಿಡಿಯೋ ದಾಖಲೆ ಇವೆ ಎಂದರು.

ಈ ಕಾಮಗಾರಿಗಳಲ್ಲಿ ಜೆಇ, ಎಇ, ಎಇಇ, ಗುತ್ತಿಗೆದಾರ ಸೇರಿ ಶಾಸಕರ ಮೇಲೂ ನಮಗೆ ಅನುಮಾನ ಬಂದಿದೆ. ಕೆಲಸ ಮಾಡದೇ ಬಿಲ್‌ ಎತ್ತುವಳಿ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಗೂ ಒತ್ತಾಯಿಸಿ, ಸಿಇಒಗೆ ಮನವಿ ಸಲ್ಲಿಸಿದ್ದೆ. ಸಿಇಒ ಸಹಿತ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಹಾಗಾಗಿ ಜೂ.4ರವರೆಗೂ ಅವರಿಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಪಂ ಸಿಇಒ ಕಚೇರಿ ಮುಂದೆ ಧರಣಿ ನಡೆಸಲಿದ್ದೇವೆ ಎಂದರು.
ಬೋಗಸ್‌ ಬಿಲ್‌ ಕುರಿತು, ಆರ್‌ಡಿಪಿಆರ್‌ ಸಚಿವರು ಸೇರಿದಂತೆ ಸಂಬಂಧಿ ತ ಎಲ್ಲರಿಗು ಪತ್ರ ಬರೆದಿದ್ದೇನೆ. ಶಾಸಕ ಬಸವರಾಜ ದಡೇಸುಗೂರು ಅವರು ಬೋಗಸ್‌ ಆಗಿಲ್ಲ, ಅಕ್ರಮ ನಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳುತ್ತಿದ್ದಾರಲ್ಲ. ಹಾಗಾದರೆ, ಅವರು ಪ್ರಮಾಣಿಕರಾಗಿದ್ದರೆ ಇದನ್ನು ತನಿಖೆಗೆ ಒಪ್ಪಿಸಲಿ. ನಾನು ಈ ಹಿಂದೆ ಮಂತ್ರಿಯಾಗಿದ್ದಾಗ ನನ್ನ ಮೇಲೆ ಆಪಾದನೆ ಬಂದಾಗ ಸಿಒಡಿ ತನಿಖೆಗೆ ಒಪ್ಪಿಸಿದ್ದೆ. ಆ ತನಿಖಾ ವರದಿಯನ್ನಾದರೂ ಒಪ್ಪಿ ಬಿಜೆಪಿ ಸರ್ಕಾರ ಬಹಿರಂಗ ಪಡಿಸಲಿ ಎಂದರಲ್ಲದೇ, ನಾನು ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದಿಲ್ಲ.  ನಾನೊಬ್ಬ ಗೌಂಡಿ ಮಗ, ಬಡ ಕುಟುಂಬದಿಂದ ಬಂದಿದ್ದೇನೆ. ನನ್ನ ಆಸ್ತಿಯ ಕುರಿತು ಬೇಕಿದ್ದರೆ ಅವರದ್ದೇ ಸರ್ಕಾರ ತನಿಖೆ ಮಾಡಿಸಲಿ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರಡ್ಡಿ, ಕಾಟನ್‌ ಪಾಷಾ, ರಡ್ಡಿ ಶ್ರೀನಿವಾಸ ಇತರರು ಇದ್ದರು.

ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗೆ ನೇರ ಸದಸ್ಯರ ನಾಮ ನಿರ್ದೇಶನ ಮಾಡುವ ಚಿಂತನೆ ನಡೆಸಿದ್ದು, ಕೂಡಲೇ ಇದನ್ನು ಕೈಬಿಡಬೇಕು. ಇದರಿಂದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಈ ಕುರಿತು ನಾವೂ ಸರ್ಕಾರದ ಗಮನ ಸೆಳೆಯಲಿದ್ದೇವೆ. ಇನ್ನು ಸಚಿವ ಮಾಧುಸ್ವಾಮಿ ಅವರು ಮಹಿಳೆಗೆ ಅವಾಚ್ಯ ಶಬ್ದವನ್ನು ಬಳಸಿದ್ದು ಸರಿಯಲ್ಲ. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಶಿವರಾಜ ತಂಗಡಗಿ, ಮಾಜಿ ಸಚಿವ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next