Advertisement

ಮತ್ತೆ ಕೇಳಿ ಬಂದ ಆಡಿಯೋ ಬಾಂಬ್‌

01:02 AM Oct 21, 2020 | mahesh |

ಬೆಂಗಳೂರು: ಮುನಿರತ್ನ ಸಹಿತ ಕಾಂಗ್ರೆಸ್‌ನ ಹಲವು ಶಾಸಕರು ಪಕ್ಷ ತೊರೆಯಲು ಹಾಗೂ ಮೈತ್ರಿ ಸರಕಾರವನ್ನು ಪತನಗೊಳಿಸಲು ಯಾರು ಕಾರಣ ಎಂಬುದನ್ನು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ತಾವು ನಂಬುವ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಅವರು, ಸೂಕ್ತ ಸಂದರ್ಭದಲ್ಲಿ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಲಾಗುವುದು ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಬಿಜೆಪಿ ನಗರ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದ ಉಪಚುನಾವಣೆ ಇನ್ನಷ್ಟು ವಿಳಂಬವಾಗಲಿದೆ ಎಂಬ ವಿಪಕ್ಷಗಳ ನಿರೀಕ್ಷೆ ಹುಸಿಯಾಗಿದೆ. ಉಪ ಚುನಾವಣೆಗೆ ವಿಪಕ್ಷಗಳಲ್ಲಿ ಯಾವುದೇ ವಿಷಯವಿಲ್ಲದೆ ಬಿಜೆಪಿ ಅಭ್ಯರ್ಥಿ ವಿರುದ್ಧ ಶಿವಕುಮಾರ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಮುನಿರತ್ನ ಪಕ್ಷ ಬಿಡುವಂತೆ ಮಾಡಿದವರು ಯಾರು, ಅವರನ್ನು ಕಳುಹಿಸಿಕೊಟ್ಟವರು ಯಾರು ಎಂಬುದನ್ನು ಹೇಳಲು ಡಿ.ಕೆ.ಶಿ. ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಧೈರ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಡಿಕೆಶಿಯೇ ಮೀರ್‌ಸಾದಿಕ್‌!
ಮೀರ್‌ ಸಾದಿಕ್‌ ಎಂದು ಯಾರಾದರೂ ಇದ್ದರೆ ಅದು ಡಿ.ಕೆ. ಶಿವಕುಮಾರ್‌ ಮಾತ್ರ. ಜತೆಯಲ್ಲಿದ್ದವರಿಗೆ ನಂಬಿಕೆ ದ್ರೋಹ ಬಗೆದಿದ್ದಾರೆ. ಸಿದ್ದರಾಮಯ್ಯ ತಮ್ಮ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಕ್ಕೆ ಮೂರು ಸ್ಥಾನದ ಕೊರತೆ ಇತ್ತು. ಆಗಲೂ ಪಕ್ಷೇತರ ಶಾಸಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು? ಕಳೆದ ವರ್ಷ ಅವರ ಕಟ್ಟಾ ಹಿಂಬಾಲಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು ಎಂದು ಮಾತಿನ ಚಾಟಿ ಬೀಸಿದರು.

ಸೂಕ್ತ ಸಂದರ್ಭದಲ್ಲಿ ಆಡಿಯೋ ಬಿಡುಗಡೆ!
ಮುನಿರತ್ನ 50 ಕೋ. ರೂ. ಪಡೆದಿದ್ದಾರೆ ಎಂಬುದಾಗಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಮುನಿರತ್ನ ಅವರನ್ನು ಪಕ್ಷ ಬಿಟ್ಟು ಹೋಗುವಂತೆ ಕಳುಹಿಸಿದವರು ಈಗ ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next