ನವೆಂಬರ್ ತಿಂಗಳು ಎಂದರೆ ಕನ್ನಡದ ಮೇಲೆ ಎಲ್ಲಿಲ್ಲದ ಗೌರವ ಭಾವನೆ. ಕನ್ನಡವನ್ನು ಮಾತನಾಡಿದರೆ ಎಲ್ಲಿ ತಮ್ಮ ಘನತೆ ಕಡಿಮೆ ಆಗುತ್ತದೆಯೋ ಎನ್ನುವಂತವರೂ ನವೆಂಬರ್ ನಲ್ಲಿ ಕನ್ನಡವನ್ನು ಮಾತನಾಡುತ್ತಾರೆ. ಇನ್ನೇನೂ ನವೆಂಬರ್ ಮಾಸ ಮುಗಿತಾ ಬಂತು. ಕನ್ನಡದ ಮೇಲಿನ ಗೌರವ ಎಲ್ಲೋ ಕಡಿಮೆಯಾಗುತ್ತದೆ ಅನಿಸುತ್ತಿದೆ. ಕನ್ನಡ ಎಂದರೆ ತಾತ್ಸಾರ ಮಾಡುವವರು ಹೆಚ್ಚಾಗಿದ್ದಾರೆ. ಕನ್ನಡ ನಾಡು ಉದಯವಾಗಿ ಕರ್ನಾಟಕ ಎಂದು ಮರುನಾಮಕರಣಗೊಂಡು ಸಾಕಷ್ಟು ವರ್ಷಗಳಾಗಿವೆ. ಕನ್ನಡ ಬೆಳೆಯಬೇಕು ಎನ್ನುವುದು ಏಕೀಕರಣದ ಆಶಯವಾಗಿತ್ತು. ಆದರೆ ನಮ್ಮ ಭಾಷೆ -ಸಂಸ್ಕೃತಿ ದಿನೇ ದಿನೇ ಕ್ಷಿಣಿಸುತ್ತಿದೆ. ನಮ್ಮ ನೆಲೆಯಲ್ಲಿ ನಾವು ಪರಕೀಯರಾಗುವಂಥ ಪರಿಸ್ಥಿತಿ ಬಂದೊದಗಿದೆ. ಹೀಗಾಗಬಾರದು ನಮ್ಮ ನೆಲ, ಭಾಷೆ, ಸಂಸ್ಕೃತಿಯ ಮೇಲೆ ಗೌರವ ಭಾವನೆಯನ್ನು ಬೆಳೆಸಿಕೊಂಡು ಅದನ್ನು ಉಳಿಸಿ ರಕ್ಷಿಸಿಕೊಂಡು ಹೋಗಬೇಕು.
ಹುಟ್ಟಿದ್ದು ಕನ್ನಡನಾಡಲ್ಲಿ, ಬೆಳೆದಿದ್ದು ಕನ್ನಡನಾಡಲ್ಲಿ, ಉಸಿರಾಡುತ್ತಿರುವುದು ಕನ್ನಡದ ಮಣ್ಣಲ್ಲಿ, ಅನ್ನ ನೀಡಿದ್ದು ಕನ್ನಡ ನಾಡು, ಬದುಕಲು ಕಲಿಸಿದ್ದು ಕನ್ನಡ ನಾಡು ಹೀಗಿದ್ದ ಮೇಲೆ ಮಾತನಾಡುವುದು ಪರಭಾಷೆಯೇ.!? ಇತ್ತೀಚಿಗೆ ಪಾಶ್ಚಿಮಾತ್ಯರ ಸಂಸ್ಕೃತಿಗೆ ಒಳಗಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಬಾರದು ನಮ್ಮ ಮೊದಲ ಆದ್ಯತೆ ಏನಿದ್ದರೂ ಕನ್ನಡಕ್ಕಿರಬೇಕು, ಕರುನಾಡ ಮೇಲಿರಬೇಕು.
ಹಾಗಂತ ಪರ ಭಾಷೆ ಕಲಿಯಬಾರದು, ಆಂಗ್ಲಮಾದ್ಯಮದಲ್ಲಿ ಓದಬಾರದು, ಪರ ಭಾಷೆಯ ಸಿನಿಮಾ ನೋಡಬಾರದು ಅಂತಲ್ಲ. ಮನುಷ್ಯ ಹೊರ ಜಗತ್ತನ್ನು ಸಂಪರ್ಕಿಸಬೇಕೆಂದರೆ ಪರ ಭಾಷೆ ಅವಶ್ಯವಾಗಿದೆ. ಆದರೆ ಬೇರೆ ಭಾಷೆಯನ್ನು ಕಲಿತ ಮೇಲೆ ಕನ್ನಡವನ್ನು ಮರೆಯಬಾರದು. ಭಾಷೆ ಮತ್ತು ನಾಡಿನ ಮೇಲಿನ ಅಭಿಮಾನ ಹಾಕುವ ಬಟ್ಟೆಯಿಂದ ಅಥವಾ ಹಿಡಿಯುವ ಬಾವುಟದಿಂದ ಬರುವುದಲ್ಲ. ಇದು ಪ್ರತಿಯೊಬ್ಬರ ಮನಸಲ್ಲಿ ನಾಡಿನ ಮೇಲೆ ಅಭಿಮಾನ ಗೌರವ ಮೂಡಬೇಕು. ಕನ್ನಡ ಹೇಳುವುದು ನಮ್ಮ ಚರ್ಮ ಆಗಿದ್ದರೆ ಪರಭಾಷೆ ಹೇಳುವುದು ನಾವು ಹಾಕುವ ಬಟ್ಟೆಯಾಗಿದ್ದರೆ ಮಾತ್ರ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ.
-ಕೆ.ಎಂ. ಪವಿತ್ರಾ
ಎಂಜಿಎಂ, ಉಡುಪಿ