ಮೈಸೂರು: ಸರ್ಕಾರಗಳ ಅವೈಜ್ಞಾನಿಕ ನೀತಿಗಳಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ. ಹೀಗಾಗಿ ರೈತರ ಹೆಸರಲ್ಲಿ ಒಂದು ದಿನದ ಮಟ್ಟಿಗೆ ದಿನಾಚರಣೆ ಆಚರಿಸಿದರೆ ಸಾಲದು, ರೈತರ ಸಂಕಷ್ಟಗಳನ್ನು ನಿವಾರಿಸುವ ಕಾರ್ಯವಾಗಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ನಗರದ ಗನ್‌ಹೌಸ್ ಬಳಿಯ ಕುವೆಂಪು ಉದ್ಯಾನದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಸಂಕಷ್ಟದಲ್ಲಿರುವುದು ದುರದೃಷ್ಟ: ನಾಡಿನ ಜನರಿಗೆ ಅನ್ನ ನೀಡುವ ರೈತ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿರುವುದು ದುರಾದೃಷ್ಟಕರ, ಸರ್ಕಾರಗಳ ಅವೈಜ್ಞಾನಿಕ ನೀತಿಗಳೇ ರೈತನನ್ನು ಬಲಿ ಪಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 2ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ, ಕೆಲವು ವೇಳೆ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿದರೂ ಪರಿಹಾರ ಸಿಗದೆ ಕಂಗಾಲಾಗುತ್ತಿದ್ದಾರೆ. ಹೀಗಾಗಿ ರೈತರು ಸಂಘಟನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸಾಲಮನ್ನಾ ಗೊಂದಲ ನಿವಾರಿಸಿ: ಸರ್ಕಾರ ಸಾಲಮನ್ನಾ ಗೊಂದಲ ನಿವಾರಿಸಬೇಕು. ರಾತ್ರಿ ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ತಪ್ಪಿಸಬೇಕು, ರೈತರ ಉತ್ಪನ್ನಗಳ ಖರೀದಿಗೆ ವರ್ಷಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯುವ ವ್ಯವಸ್ಥೆ ಜಾರಿಗೆ ಬರಬೇಕು. ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕಬ್ಬು ಕಟಾವು ವಿಳಂಬ ತಪ್ಪಿಸಬೇಕು. ಕಟಾವು ಕೂಲಿ ಏರಿಕೆ ತಪ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಬಿನಿ ಶಿವನಾಗಪ್ಪ, ಕಿರಿಗಸೂರು ಶಂಕರ್, ಕೆರೆಹುಂಡಿ ರಾಜಣ್ಣ, ರಂಗಸಮುದ್ರ ಸುರೇಶ, ಬಿ.ಪಿ.ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಬಿದರಳ್ಳಿ, ಸಿ.ಕೆ.ರವೀಂದ್ರ, ವರಕೋಡು ಕೃಷ್ಣೇಗೌಡ, ಪ್ರಸಾದನಾಯಕ, ಬರಡನಪುರ ನಾಗರಾಜ್, ರಾಣಿ, ಮಹದೇವಮ್ಮ ಸೇರಿದಂತೆ ಹಲವು ರೈತರು ಸಭೆಯಲ್ಲಿ ಭಾಗವಹಿಸಿದ್ದರು.