ಬಳ್ಳಾರಿ: 75ನೇ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ಹಾಗೂ ಗರೀಬ್ ಕಲ್ಯಾಣ ಸಮ್ಮೇಳನ ಮಂಗಳವಾರ ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಶಿಮ್ಲಾದಿಂದ ದೇಶದಾದ್ಯಂತ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಫಲಾನುಭವಿಗಳ ಅಭಿಪ್ರಾಯಗಳನ್ನು ಆಲಿಸಿದರು. ನಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವುದರಿಂದ ತಮ್ಮಲ್ಲಿ ಯಾವ ಬದಲಾವಣೆಗಳಾಗಿವೆ ಎಂಬುದನ್ನು ಫಲಾನುಭವಿಗಳ ಮಾತಿನ ಮೂಲಕವೇ ತಿಳಿದುಕೊಂಡರು.
ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಸಂವಾದ ಹಾಗೂ ಗರೀಬ್ ಕಲ್ಯಾಣ ಸಮ್ಮೇಳನದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದರು. ಸಂಸದ ವೈ. ದೇವೇಂದ್ರಪ್ಪ, ಶಾಸಕ ವೈ.ಎಂ.ಸತೀಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಎಸ್ಪಿ ಸೈದುಲು ಅಡಾವತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಉಜ್ವಲ ಯೋಜನಾ, ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಯೋಜನಾ, ಸ್ವಚ್ಛ ಭಾರತ್ ಮಿಶನ್, ಜಲಜೀವನ ಮಿಶನ್ ಮತ್ತು ಅಮೃತ್, ಪ್ರಧಾನಮಂತ್ರಿ ಸ್ವನಿಧಿ ಸ್ಕೀಂ, ಒನ್ ನೇಷನ್ ಒನ್ ಕಾರ್ಡ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ, ಪ್ರಧಾನಮಂತ್ರಿ ಮುದ್ರಾ ಯೋಜನಾ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ನಂತರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಡವರ ಕಲ್ಯಾಣಕ್ಕಾಗಿಯೇ ನಾವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯೋಜನೆಗಳಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಅನುದಾನ ಸೋರಿಕೆಯನ್ನು ತಡೆಗಟ್ಟಿದ್ದೇವೆ. 8 ವರ್ಷಗಳ ನಮ್ಮ ಆಡಳಿತದಲ್ಲಿ ನಾನು ಪ್ರಧಾನ ಸೇವಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ದೇಶದ 130 ಕೋಟಿ ಜನರ ಪರಿವಾರದ ಸದಸ್ಯನಾಗಿದ್ದೇನೆ. ನಾವೆಲ್ಲರೂ ಜೊತೆಗೂಡಿ ಭಾರತವನ್ನು ಇಡೀ ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸೋಣ ಎಂದರು.
ಇಂದು ದೇಶದ 10 ಕೋಟಿಗೂ ಹೆಚ್ಚಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೇವೆ. ಇಡೀ ರಾಷ್ಟ್ರದ ಜನ ಈ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಭಾಗವಹಿಸಿ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಜಿಲ್ಲೆಯಲ್ಲಿ ಬಳ್ಳಾರಿ ತಾಲೂಕಿನ 26687 ರೈತರಿಗೆ ವರ್ಗಾವಣೆಯಾದ ಮೊತ್ತ ರೂ.51.46ಕೋಟಿ, ಕುರುಗೋಡು 14432 ರೈತರಿಗೆ ರೂ.35.04 ಕೋಟಿ, ಕಂಪ್ಲಿ 10464 ರೈತರಿಗೆ ರೂ.31.38 ಕೋಟಿ, ಸಂಡೂರು 12985 ರೈತರಿಗೆ ರೂ.31.80 ಕೋಟಿ, ಸಿರುಗುಪ್ಪ 29918 ರೈತರಿಗೆ ರೂ.52.55 ಕೋಟಿ ವರ್ಗಾವಣೆಯಾಗಿದೆ ಎಂದರು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 10 ಕಂತುಗಳು ಹಾಗೂ ರಾಜ್ಯ ಸರ್ಕಾರದಂದ 5 ಕಂತುಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೇರವಾಗಿ ಹಣ ವರ್ಗಾವಣೆ ಮುಖಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದರು.