ಚಿಕ್ಕಬಳ್ಳಾಪುರ: ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ವೇಳೆ ಅಡುಗೆ ಸಿಬ್ಬಂದಿ ಹೆಚ್ಚು ಜಾಗರೂಕರಾಗಿ ಸುರಕ್ಷತೆ ಕಡೆಗೆ ಹೆಚ್ಚು ನಿಗಾ ವಹಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಬಿಸಿಯೂಟ ನೌಕರರಿಗೆ ಸಲಹೆ ನೀಡಿದರು. ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಗ್ಯಾಸ್ ಕಂಪನಿ, ಅಕ್ಷರ ದಾಸೋಹ ಯೋಜನೆಯಡಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಏರ್ಪಡಿಸಿದ್ದ 2 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದ್ಯತೆ ನೀಡಿ: ಬಿಸಿಯೂಟ ತಯಾರಿಸುವ ವೇಳೆ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಅನೇಕ ಅವಘಡಗಳು ಸಂಭವಿಸಿ ಶಾಲಾ ಮಕ್ಕಳು, ಅಡುಗೆ ಸಿಬ್ಬಂದಿ ಸುಟ್ಟು ಗಾಯಗಳಿಂದ ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಅಡುಗೆ ಸಿಬ್ಬಂದಿ ಹೆಚ್ಚು ಜಾಗ್ರತೆ ವಹಿಸಿ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿ ಅಡುಗೆ ಅನಿಲ ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಬೇಕೆಂದರು.
ಆಕಸ್ಮಿಕವಾಗಿ ನಡೆಯುವ ಘಟನೆಗಳಿಂದ ದೊಡ್ಡ ದುರಂತಗಳು ಸಂಭವಿಸಿ ಅಮಾಯಕರು ಬಲಿ ಆಗಬೇಕಾಗುತ್ತದೆ. ಹೀಗಾಗಿ ಅಡುಗೆ ಸಿಬ್ಬಂದಿ ಸ್ವಚ್ಛತೆ, ನೈರ್ಮಲ್ಯದ ಕಡೆಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕು. ಅಡುಗೆ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದರೆ ಸಾಲದು, ಪೌಷ್ಟಿಕಾಂಶಯುಕ್ತ, ಉತ್ತಮ ಗುಣಮಟ್ಟದ ಬಿಸಿಯೂಟ ಸಿಗುವಂತೆ ನೋಡಿಕೊಳ್ಳುವ ಮೂಲಕ ತಾಲೂಕನ್ನು ಅಪೌಷ್ಟಿಕತೆ ಮುಕ್ತ ಮಾಡಬೇಕು ಎಂದರು.
ಕಾಳಜಿ ವಹಿಸಿ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜತೆಗೆ ಸರ್ಕಾರ ಅಪೌಷ್ಟಿಕತೆ ದೂರ ಮಾಡಲು ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸಿ ಮಧ್ಯಾಹ್ನ ಮಕ್ಕಳು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಗುಣಮಟ್ಟದ ಆಹಾರ ಪೂರೈಸುತ್ತಿದೆ. ಅಕ್ಕಿ, ಬೇಳೆ ಸೇರಿದಂತೆ ವಿವಿಧ ಧಾನ್ಯ ಕಳಪೆ ಇರುವುದು ಕಂಡು ಬಂದರೆ ತಕ್ಷಣವೇ ಅಡುಗೆ ಸಿಬ್ಬಂದಿ ಸಂಬಂಧಿಸಿದ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಅಡುಗೆ ಗುಣಮಟ್ಟದ ಬಗ್ಗೆ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸಬೇಕೆಂದರು.
ಸಿಬ್ಬಂದಿ ಮೊದಲು ಊಟ ಮಾಡಲಿ: ಅಶುದ್ಧತೆಯಿಂದ ಹಲವು ಕಾಯಿಲೆಗಳು ಹರಡುತ್ತವೆ. ಹೀಗಾಗಿ ದಾಸ್ತಾನು ಹಾಗೂ ಅಡುಗೆ ಕೊಠಡಿ, ಅಡುಗೆ ಪಾತ್ರೆ, ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಬಹುತೇಕ ಬಡವರ ಮಕ್ಕಳು ದಾಖಲಾಗುತ್ತಾರೆ. ಅವರನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಜತೆಗೆ ಅವರ ಆರೋಗ್ಯ ಉತ್ತಮಪಡಿಸಲು ಮುಂದಾಗಬೇಕು. ಉತ್ತಮ ಗುಣಮಟ್ಟದ ತರಕಾರಿ, ಸೊಪ್ಪು ಬಳಸಬೇಕು. ಅಡುಗೆ ಸಿದ್ಧವಾದ ಬಳಿಕ ಮೊದಲು ಅಡುಗೆ ಸಿಬ್ಬಂದಿ ಊಟ ಮಾಡಿ ಆಹಾರ ಗುಣಮಟ್ಟ ಪರೀಕ್ಷಿಸಬೇಕು ಎಂದರು.
ಕಾರ್ಯಾಗಾರದಲ್ಲಿ ಮಾಜಿ ಶಾಸಕ ಎಂ.ಶಿವಾನಂದ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಲಪ್ಪ, ಕೊಂಡೇನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ್, ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಶೇಷಪ್ಪ, ಅಕ್ಷರ ದಾಸೋಹ ತಾಲೂಕು ಅಧಿಕಾರಿ ಲಲಿತಾ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಉಪಾಧ್ಯಕ್ಷೆ ಮುನಿಲಕ್ಷ್ಮಮ್ಮ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ, ವಿವಿಧಡೆಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ಇದ್ದರು.
ಕನಿಷ್ಠ ವೇತನ ನೀಡಿ: ಕೇಂದ್ರ-ರಾಜ್ಯ ಸರ್ಕಾರಗಳು ಬಿಸಿಯೂಟ ನೌಕರರಿಗೆ ಪಿಂಚಣಿ, ಕನಿಷ್ಠ ವೇತನ ಜಾರಿಗೊಳಿಸುವ ಮೂಲಕ ನೌಕರರ ಸೇವೆ ಎತ್ತಿ ಹಿಡಿಯಬೇಕು. ನೌಕರರನ್ನು ಡಿ ಗ್ರೂಪ್ ನೌಕರರರೆಂದು ಪರಿಗಣಿಸಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಭತ್ಯೆ ನೀಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಆಗ್ರಹಿಸಿದರು.