Advertisement

ಶಿಥಿಲ ದೇವಾಲಯ ಜೀರ್ಣೋದ್ಧಾರಕ್ಕೆ ಸರ್ಕಾರ ಮುಂದಾಗಲಿ

09:03 PM Feb 25, 2020 | Lakshmi GovindaRaj |

ಚನ್ನರಾಯಪಟ್ಟಣ: ಹಿಂದೂ ದೇವಾಲಯಗಳಲ್ಲಿ ಬರುವ ಆದಾಯವನ್ನು ಇತರ ಕೆಲಸಕ್ಕೆ ಹಣ ವಿನಿಯೋಗ ಮಾಡದೆ ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ವೆಚ್ಚ ಮಾಡಬೇಕು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಒತ್ತಾಯಿಸಿದರು.

Advertisement

ಪಟ್ಟಣದ ಗಣಪತಿ ಪೆಂಡಾಲಿನದ ತಾಲೂಕು ಧಾರ್ಮಿಕ ದತ್ತಿ ಹಿಂದೂ ದೇವಾಲಯಗಳ ಅರ್ಚಕ ಆಗಮಿಕ ಉಪಾದಿವಂತರ ಸಂಘದ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಸರ್ಕಾರಿ ಹಿಂದೂ ದೇವಾಲಯಗಳ ಹಣದಲ್ಲಿ ಸಾಮೂಹಿಕ ವಿವಾಹ ಮಾಡಲು ಹೊರಟಿದೆ ಇದಾಗಬಾರದು.ರಾಜ್ಯದಲ್ಲಿ ಅನೇಕ ದೇವಾಲಯಗಳು ಬೀಳುವ ಹಂತದಲ್ಲಿ ಇವೆ. ಅವುಗಳು ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ದೇವಾಲಯಗಳು ಉಳಿಯಬೇಕು: ಭಾರತ ಎಂದರೆ ದೇವಾಲಯಗಳ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯಗಳೂ ಮಳೆ ಗಾಳಿಗೆ ಹಾಳಾಗುತ್ತಿವೆ. ಇವುಗಳ ಅಭಿವೃದ್ಧಿ ಮಾಡುವಲ್ಲಿ ಸರ್ಕಾರಗಳು ವಿಫ‌ಲವಾಗಿವೆ. ಈ ಹಿಂದಿನ ಸರ್ಕಾರ ದೇವಾಲಯದ ಹಣವನ್ನು ಇತರ ಕೆಲಸಕ್ಕೆ ಉಪಯೋಗಿಸುತ್ತಿತ್ತು. ಈಗಿನ ಸರ್ಕಾರ ಸಮೂಹಿಕ ವಿವಾಹಕ್ಕೆ ಬಳಕೆ ಮಾಡುತ್ತಿದೆ. ಇದೇ ರೀತಿ ಅಧಿಕಾರಕ್ಕೆ ಬಂದ ಸರ್ಕಾರಗಳು ದೇವಾಲಯವನ್ನು ಕಡೆಗಣಿಸಿದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ದೇವಾಲಯಗಳು ಉಳಿಯಬೇಕು ಎಂದು ಮನವರಿಕೆ ಮಾಡಿದರು.

ಸಂಘಕ್ಕೆ ನಿವೇಶನ: ತಾಲೂಕು ಧಾರ್ಮಿಕ ದತ್ತಿ ಹಿಂದೂ ದೇವಾಲಯಗಳ ಅರ್ಚಕ ಆಗಮಿಕ ಉಪಾದಿವಂತರ ಸಂಘಕ್ಕೆ ಈಗಾಗಲೇ ನಿವೇಶನ ಮೀಸಲಿಡಲಾಗಿದೆ. ಆದರೆ ಸ್ಥಳಿಯ ಯೋಜನಾ ಪ್ರಾಧಿಕಾರಿದ ತಾಂತ್ರಿಕ ತೊಂದರೆಯಿಂದ ತಡವಾಗುತ್ತಿದೆ. ಶೀಘ್ರದಲ್ಲಿ ನಿವೇಶನವನ್ನು ಸಂಘಕ್ಕೆ ಹಸ್ತಾಂತರ ಮಾಡಲಾಗುವುದು ಎಂದರು. ಚಿಕ್ಕೋನಹಳ್ಳಿ ಅಮರಗಿರಿ ರಂಗನಾಥಸ್ವಾಮಿ, ಬೂಕನಬೆಟ್ಟದ ರಂಗನಾಥಸ್ವಾಮಿ, ಬೀಜಗೊಂಡನಹಳ್ಳಿ ಅಂಜನೇಯಸ್ವಾಮಿ ದೇವಾಲಯಚನ್ನು ಪ್ರವಾಸಿ ಕೇಂದ್ರದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದ‌ರು.

ಸ್ವಚ್ಛತೆಗೆ ಆದ್ಯತೆ ನೀಡಿ: ನುಗ್ಗೇಹಳ್ಳಿ ಪುರವರ್ಗದ ರಂಭಾಪುರಿ ಶಾಖಾ ಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳು ಭಕ್ತರನ್ನು ಆಕರ್ಷಿಸಬೇಕು ಎಂದರೆ ದೇವಾಲಯದ ಸುತ್ತ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದರು. ನಾವು ನಡೆಯುವ ದಾರಿ ಪರಿಶುದ್ಧವಾಗಿ ಇರಬೇಕು. ಸಮಾಜದಲ್ಲಿ ಗೌರವ ಲಭಿಸಬೇಕೆಂದರೆ ಶಾಸ್ತ್ರ ಹಾಗೂ ಆಗಮನವನ್ನು ಕಲಿಯಬೇಕು ಎಂದು ತಿಳಿ ಹೇಳಿದರು.

Advertisement

ತಾಲೂಕು ಧಾರ್ಮಿಕ ದತ್ತಿ ಹಿಂದೂ ದೇವಾಲಯಗಳ ಅರ್ಚಕ ಆಗಮಿಕ ಉಪಾದಿವಂತರ ಸಂಘದ ಅಧ್ಯಕ್ಷ ಶೀಧರ್‌ಮೂರ್ತಿ, ಕಾರ್ಯದರ್ಶಿ ರಾಮಚಂದ್ರ, ಉಪಾಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ನಾಗೇಶ, ಸಂಘಟನಾ ಕಾರ್ಯದರ್ಶಿ ಗೀತಾ, ಮುಜರಾಯಿ ಅಧಿಕಾರಿ ತೇಜಸ್ವಿನಿ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಕೃತ ಪಾಠಶಾಲೆ ತೆರೆಯಲು ಸಹಕಾರ: ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸಂಸ್ಕೃತ ಪಾಠ ಶಾಲೆ ತೆರೆದು ಅರ್ಚಕರು ಹಾಗೂ ಅರ್ಚಕರ ಮಕ್ಕಳು ಸಂಸ್ಕೃತ ಕಲಿಯಲು ಮುಂದಾಗಬೇಕು. ಅನೇಕ ಮಂದಿ ಹೊರ ಜಿಲ್ಲೆಗೆ ತೆರಳಿ ಸಂಸ್ಕೃತ ಪಾಠ ಕಲಿಯುತ್ತಿದ್ದಾರೆ. ತಾಲೂಕಿನಲ್ಲಿ ಸಂಸ್ಕೃತ ಪಾಠ ಶಾಲೆ ತೆರೆಯಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಜೆಟ್‌ನಲ್ಲಿ ಹಣ ಮೀಸಲಿಡಿ: ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮುಜರಾಯಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸುಮಾರು 50 ಲಕ್ಷ ರೂ.ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿರುವ ದೇವಾಲಯಗಳ ಅಭಿವೃದ್ಧಿಯೂ ಮುಖ್ಯವಾಗಿವೆ. ಇವುಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಮುಜರಾಯಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.

ಹಿಂದೂ ದೇವಾಲಯಗಳ ಅರ್ಚಕರು ಅವರ ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು. ಆಧುನಿಕ ಯುಗದಲ್ಲಿ ಅರ್ಚಕರು ತಮ್ಮ ವೇಷ ಹಾಗೂ ಲಾಂಛವನ್ನು ಮರೆಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ ಮೇಲೆ ಪೆಟ್ಟು ಬೀಳಲಿದೆ.
-ಡಾ.ಮಹೇಶ್ವರ ಶಿವಾಚಾರ್ಯರು, ನುಗ್ಗೇಹಳ್ಳಿ ಪುರವರ್ಗದ ರಂಭಾಪುರಿ ಶಾಖಾ ಮಠದ

Advertisement

Udayavani is now on Telegram. Click here to join our channel and stay updated with the latest news.

Next