Advertisement

ಸಹಕಾರಿ ಕ್ಷೇತ್ರ ರಾಜಕಾರಣಿಗಳಿಂದ ಮುಕ್ತವಾಗಿರಲಿ

11:42 PM Mar 20, 2022 | Team Udayavani |

ಬೆಂಗಳೂರು: ಅನ್ಯರಾಜ್ಯಗಳಲ್ಲಿ ಸಹಕಾರಿ ರಂಗವು ಅಲ್ಲಿನ ಸರಕಾರಗಳನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬಲಿಷ್ಠವಾಗಿ ಬೆಳೆದಿವೆ. ಆದರೆ, ನಮ್ಮಲ್ಲಿ ನಾವೆಲ್ಲರೂ ಸೇರಿ ಸಹಕಾರಿ ಕ್ಷೇತ್ರ ನಿಯಂತ್ರಿಸುವಲ್ಲಿ ನಿರತರಾಗಿದ್ದೇವೆ. ಈ ಕಪಿಮುಷ್ಠಿಯಿಂದ ಅದನ್ನು ಹೊರತರುವ ಆವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಕೆಂಗೇರಿಯಲ್ಲಿ ರವಿವಾರ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ “ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕದಲ್ಲಿ ಸಹಕಾರವನ್ನು ಎಲ್ಲ ರಂಗಗಳಲ್ಲಿ ವಿಸ್ತರಿಸಲು ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿದ್ದು, ಇದರೊಂದಿಗೆ ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲುವಂತಾ ಗಬೇಕು ಎಂದು ಹೇಳಿದರು.

ಸಹಕಾರಿ ಸಾಹುಕಾರ ಪದ್ಧತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಇದಕ್ಕೆ ಇತಿಶ್ರೀ ಹಾಡಬೇಕು. ಈ ನಿಟ್ಟಿನಲ್ಲಿ ಸರಕಾರವು ಸಹಕಾರಿ ಸಂಘಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸದಸ್ಯತ್ವ ನೋಂದಣಿಗೆ ಅವಕಾಶ ಕಲ್ಪಿಸುವುದರ ಜತೆಗೆ ಆ ನೋಂದಣಿ ಶುಲ್ಕವನ್ನೂ ಸರಕಾರ ಭರಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.

ಮಾಜಿ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಕೇಂದ್ರದ ಜನೌಷಧ ಕೇಂದ್ರಗಳನ್ನು ಸಹಕಾರ ಕ್ಷೇತ್ರದಿಂದಲೂ ನಡೆಸಲು ವೇದಿಕೆ ಒದಗಿಸಲಾಗುತ್ತಿದೆ. ಸರಕಾರಕ್ಕೆ ಸಮಾನಾಂತರವಾಗಿ ಜೀವನ ನಡೆಸುವ ಮತ್ತೂಂದು ವೇದಿಕೆಯೆಂದರೆ ಅದು ಸಹಕಾರಿ ಕ್ಷೇತ್ರ ಎಂದು ಬಣ್ಣಿಸಿದರು.

60 ಸಾಧಕರಿಗೆ ಸಹಕಾರ ರತ್ನ ಪ್ರಶಸ್ತಿ
ಕರಾವಳಿಯ ಸವಣೂರು ಸೀತಾರಾಮ ರೈ, ರವಿರಾಜ ಹೆಗ್ಡೆ , ಚಿತ್ತರಂಜನ್‌ ಬೋಳಾರ್‌ ಸಹಿತ 60 ಗಣ್ಯರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟ ಪುನೀತ್‌ಗೆ ಮರಣೋತ್ತರವಾಗಿ ಬಂದ ಪ್ರಶಸ್ತಿ ಪಡೆಯಲು ಕುಟುಂಬ ಸದಸ್ಯರು ಹಾಜರಿರದ ಹಿನ್ನೆಲೆಯಲ್ಲಿ ಅವರ ಮನೆಗೆ ಹೋಗಿ ಪ್ರಶಸ್ತಿ ತಲುಪಿಸುವುದಾಗಿ ಘೋಷಿಸಲಾಯಿತು.

Advertisement

ತಾ|ಗೊಂದು ಮಹಿಳಾ ಸಹಕಾರ ಸಂಘ: ಸಿಎಂ
ಬೆಂಗಳೂರು: ರಾಜ್ಯದ ಪ್ರತಿ ತಾಲೂಕಿನಲ್ಲಿ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಿರುವ ಸರಕಾರ, ಇದಕ್ಕಾಗಿ ಶೇ. 90ರಷ್ಟು ಷೇರು ಬಂಡವಾಳವನ್ನೂ ಸ್ವತಃ ಸರಕಾರ ನೀಡಲಿದೆ . ಇದಲ್ಲದೆ, ರಾಜ್ಯದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸರಕಾರ ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next