Advertisement

ಪ್ರತಿ ಸಮುದಾಯ ಕಾಯಕ ವೃತ್ತಿ ಗೌರವಿಸಲಿ

06:19 PM Mar 17, 2021 | Team Udayavani |

ವಾಡಿ: ಪ್ರತಿಯೊಂದು ಸಮುದಾಯ ತನ್ನ ಕಾಯಕ ವೃತ್ತಿ ಗೌರವಿಸಬೇಕು. ಕ್ಷೌರಿಕ ವೃತ್ತಿ ಕೀಳಲ್ಲ. ಅದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ತಾವು ಹೀನರು, ಹಿಂದುಳಿದವರು, ಬಡವರು ಎಂಬ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಮಾಜಿ ರಾಜ್ಯಸಭೆ ಸದಸ್ಯ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ-ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ಕೊಂಚೂರು ಸವಿತಾ ಮಹರ್ಷಿ ಪೀಠದಲ್ಲಿ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಹಾಗೂ ಕೆರೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ದೇವರು ಎಲ್ಲರಿಗೂ ಒಂದೇ ರೀತಿಯ ಆತ್ಮ ಕೊಟ್ಟಿದ್ದಾನೆ. ಬುದ್ಧ, ವಿವೇಕಾನಂದ, ಬಸವಣ್ಣನವರ ತಲೆಯಲ್ಲಿ ಏನು ಬುದ್ಧಿಯಿತ್ತೋ ಅದೇ ಬುದ್ಧಿ ಎಲ್ಲಾ ಜಾತಿ ಸಮುದಾಯದ ಮಕ್ಕಳ ತಲೆಯಲ್ಲಿರುತ್ತದೆ. ವಿಚಾರ ದೊಡ್ಡದಾದಾಗ ನಾವೂ ದೊಡ್ಡವರಾಗುತ್ತೇವೆ ಅಷ್ಟೇ ವ್ಯತ್ಯಾಸ.

ಆದ್ದರಿಂದ ಮಕ್ಕಳು ವಿದ್ಯಾವಂತರಾಗಿ, ಗುಣವಂತರಾಗಿ ಸವಿತಾ ಪೀಠದ ಕೀರ್ತಿ ಹೆಚ್ಚಿಸುವಂತಹ ವಾತಾವರಣ ಸೃಷ್ಟಿಸಲು ಸಮಾಜದ ಮುಖಂಡರು ಚಿಂತಿಸಬೇಕು. ಸವಿತಾ ಪೀಠಕ್ಕೆ ನೇಮಕಗೊಂಡಿರುವ ಸ್ವಾಮೀಜಿ ತರುಣರಾಗಿದ್ದಾರೆ. ಮಠದ ಪ್ರಗತಿ ಮತ್ತು ಸಮುದಾಯದ ಎಳ್ಗೆಗಾಗಿ ಹಲವು ಕನಸುಗಳನ್ನು ಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಗುರುಗಳನ್ನು ಗೌರವದಿಂದ ಕಾಣುತ್ತ ಪೀಠದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಸವಿತಾ ಸಮುದಾಯದ ಜನರು ತಮ್ಮ ಕಾಯಕದ ಮೇಲೆ ನಿಷ್ಠೆ ಹೊಂದಿದ್ದಾರೆ. ಕಾಯಕದ ಮೇಲೆ ವಿಶ್ವಾಸವಿಟ್ಟು ಶ್ರದ್ಧೆಯಿಂದ ಸಮಾಜದ ಸೇವೆ ಮಾಡುತ್ತಿದ್ದಾರೆ. ಹಡಪದ ಅಪ್ಪಣ್ಣನವರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸವಿತಾ ಪೀಠದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರಕಾರದಿಂದ ಬಿಡುಗಡೆಯಾಗಿದ್ದ ಅನುದಾನ ಈಗ ಸ್ಥಗಿತಗೊಂಡಿದೆ. ಬಸವರಾಜ ಪಾಟೀಲ ಸೇಡಂ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆ ಮಾಡಿಸಿ ಪೀಠದ ಪ್ರಗತಿಗೆ ಸಹಕರಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಂಚೂರು ಸವಿತಾ ಮಹರ್ಷಿ ಪೀಠದ ಧರ್ಮಾಧಿಕಾರಿ ಶ್ರೀ ಧರಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪಶು ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಡಾ| ಬಸಲಿಂಗಪ್ಪ ಡಿಗ್ಗಿ, ರಾಜ್ಯ ಸವಿತಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌. ನರೇಶಕುಮಾರ, ಸವಿತಾ ಸಮಾಜದ ರಾಜ್ಯಾಧ್ಯಕ್ಷೆ ಸೌಭಾಗ್ಯ, ಬಂಜಾರಾ ಸಮಾಜದ ರಾಜ್ಯ ಉಪಾಧ್ಯಕ್ಷ ವಿಠಲ ಜಾಧವ, ತಾಲೂಕು ಅಧ್ಯಕ್ಷ ರಾಜು ಶಿವಪುರ, ನಗರ ಅಧ್ಯಕ್ಷ ಬಸವರಾಜ ಪಗಡೀಕರ, ಕೆಪಿಎಸ್‌ಸಿ ಸದಸ್ಯ ಲಕ್ಷ್ಮೀನಾರಾಯಣ, ಹಿರಿಯರಾದ ಮಲ್ಲಣಗೌಡ ಪೊಲೀಸ್‌ ಪಾಟೀಲ ಬಳವಡಗಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಬಾಬಾನಿ,
ಸುದೀಂದ್ರ ದೇಶಪಾಂಡೆ, ಯಾದಗಿರಿ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕರ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ರಾಘವೇಂದ್ರ, ವೀರಣ್ಣ ಯಾರಿ, ಜ್ಯೋತಿಕುಮಾರ ರಾಯಚೂರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next