ವಾಡಿ: ನಮ್ಮ ಜೀವನದುದ್ದಕ್ಕೂ ಶಿಕ್ಷಣದ ಮೂಲಕ ಸಂಪಾದಿಸಿದ ಜ್ಞಾನವನ್ನು ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿಸಿಕೊಳ್ಳದೇ ಶೋಷಣೆಗೊಳಗಾದ ಜನರ ಹೋರಾಟದ ಅಸ್ತ್ರವಾಗಿಸಿ ಎಂದು ಎಂದು ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಹೇಳಿದರು.
ಎಐಎಂಎಸ್‌ಎಸ್ ಮಹಿಳಾ ಸಂಘಟನೆ ವತಿಯಿಂದ ಪಟ್ಟಣದ ಎಸ್‌ಯುಸಿಐ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮೌಡ್ಯ, ಅಜ್ಞಾನ, ಅಂಧಕಾರದಲ್ಲಿ ಮುಳುಗಿ ಪುರುಷ ಪ್ರಧಾನ ವ್ಯವಸ್ಥೆಯಿಂದ ಶೋಷಣೆಗೊಳಗಾಗಿದ್ದ ಹೆಣ್ಣುಮಕ್ಕಳಿಗೆ ಅಕ್ಷರ ಜ್ಞಾನ ನೀಡುವಲ್ಲಿ ಇಡೀ ಬದುಕು ಮೀಸಲಿಟ್ಟ ಸಾವಿತ್ರಿಬಾಯಿ ಫುಲೆ ಮತ್ತು ಅವರ ಪತಿ ಜ್ಯೋತಿಬಾ ಫುಲೆ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.
ಈ ದಂಪತಿಯೊಂದಿಗೆ ಶೈಕ್ಷಣಿಕ ಕ್ರಾಂತಿಗೆ ದನಿಯಾಗಿ ನಿಂತ ಮುಸ್ಲಿಂ ಸಮುದಾಯದ ಮೊದಲ ಶಿಕ್ಷಿತ ಮಹಿಳೆ ಫಾತಿಮಾ ಶೇಖ್ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇವರು ತೆರೆದ ಶಾಲೆಗಳನ್ನು ಮುಚ್ಚಲು ಅಂದಿನ ಮಹಿಳಾ ಶಿಕ್ಷಣ ವಿರೋಧಿಗಳು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಇವುಗಳಿಗೆ ಎದೆಗುಂದದ ಫುಲೆ ದಂಪತಿ ಹೆಣ್ಣಿನ ನಾಲಿಗೆ ಮೇಲೆ ಅಕ್ಷರಗಳನ್ನು ಬರೆದು ಅವರ ಹಣೆಬರಹವನ್ನೇ ಬದಲಿಸಿದರು ಎಂದರು.
ದೇಶದ ವಿವಿಧ ಕ್ಷೇತ್ರಗಳಲ್ಲದೇ ವಿದೇಶಗಳಲ್ಲಿಯೂ ಮಹಿಳೆಯರು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರೆ ಅದಕ್ಕೆ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಫಾತಿಮಾ ಶೇಖ್, ರಾಜಾರಾಮ ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ ಕಾರಣರಾಗಿದ್ದಾರೆ ಎಂದರು.
ಶಿಕ್ಷಕಿ ಪದ್ಮರೇಖಾ ವಿ.ಕಾಳೆ ಬೆಳಗುಂದಿ ಮಾತನಾಡಿ, ಎಲ್ಲ ಸಮುದಾಯದ ಮಹಿಳೆಯರಿಗೆ ಶಿಕ್ಷಣ ಕೊಡಲು ಪಣ ತೊಟ್ಟ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಸಮಾಜದಲ್ಲಿನ ಎಲ್ಲ ಅಡೆತಡೆಗಳನ್ನು ದಿಟ್ಟತನದಿಂದ ಎದುರಿಸಿ ಜ್ಞಾನದ ಜ್ಯೋತಿಯಾದರು. ಅವರು ಹಚ್ಚಿದ ಶಿಕ್ಷಣದ ಜ್ಯೋತಿಯನ್ನು ಎತ್ತಿ ಹಿಡಿಯಲು ಸಂಘಟಿತರಾಗೋಣ ಎಂದು ಹೇಳಿದರು.
ಎಐಎಂಎಸ್‌ಎಸ್ ಮಹಿಳಾ ಸಂಘಟನೆ ನಗರ ಸಮಿತಿ ಸದಸ್ಯರಾದ ಜಯಶ್ರೀ ಜಿ.ಕುಂಬಾರ, ಕೋಕಿಲಾ ಶರಣು ಹೇರೂರ, ಶಿವಲೀಲಾ ರಮೇಶ ಹಡಪದ, ಶರಣಮ್ಮ ಕುಂಬಾರ, ಸೀತಾಬಾಯಿ ಎಂ.ಹೇರೂರ, ಶರಣಮ್ಮ ಹಡಪದ, ಜ್ಯೋತಿ ರಾಜು ಒಡೆಯರಾಜ, ಶಾಂತಮ್ಮ ನಾಯ್ದೊಡಿ, ಲಕ್ಷ್ಮೀ ಎಸ್.ಹೇರೂರ, ರೇಣುಕಾ ಮತ್ತಿತರರು ಪಾಲ್ಗೊಂಡಿದ್ದರು.