ಕಲಬುರಗಿ: ಚಿನ್ನಾಭರಣಗಳ ಮೇಲಿನ ಸಾಲ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ನೀಡುತ್ತಿದ್ದು, ಜನಸಾಮಾನ್ಯರಿಗೆ ಈ ಸೌಲಭ್ಯ ನಿಲುಕದಂತೆ ಆಗಿರುವುದರಿಂದ ಸಹಕಾರ ಸಂಘಗಳು ಚಿನ್ನಾಭರಣಗಳ ಮೇಲೆ ಸಾಲ ನೀಡಲು ಮುಂದೆ ಬರುವುದು ಅಗತ್ಯವಿದೆ ಎಂದು ಯುಕೆಪಿ ಕಾಡಾದ ಭೂ-ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ ಶರಣಬಸಪ್ಪ ಬೆಣ್ಣೂರ ಹೇಳಿದರು.
ನಗರದ ಶೇಖರೋಜಾ ಬಡಾವಣೆಯ ವೀರಶೈವ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡ ಚಿನ್ನಾಭರಣಗಳ ಮೇಲಿನ ಸಾಲ ಸೌಲಭ್ಯದ ಕಾರಉಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಹುತೇಕ ಅಕ್ಷರಸ್ಥ ಹಾಗೂ ಅನೂಕೂಲಸ್ಥರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಸೌಲಭ್ಯ ಪಡೆಯುತ್ತಾರೆ. ಆದರೆ ಜನಸಾಮಾನ್ಯರ ಬಳಿ ಒಡವೆಗಳಿದ್ದರೂ ಸಾಲ ಪಡೆಯುವುದು ಗಗನ ಕುಸುಮವಾಗಿದೆ. ಏಕೆಂದರೆ ಅವರಿಗೆ ವ್ಯವಹಾರದ ಜ್ಞಾನ ಕಡಿಮೆ. ಬ್ಯಾಂಕುಗಳ ದಾಖಲೆಗಳನ್ನು ಸಕಾಲದಲ್ಲಿ ಪೂರೈಸಲು ಆಗದೇ ಇರುವುದರಿಂದ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಚಿನ್ನಾಭರಣದ ಮೇಲೆ ಸಾಲ ಪಡೆದು ಬಡ್ಡಿ, ಸುಸ್ತಿಬಡ್ಡಿ ದಾಖಲೆಗಳ ಶುಲ್ಕ, ಪ್ರಕ್ರಿಯೆ ಶುಲ್ಕ ಹೀಗೆ ಹಲವಾರು ರೀತಿಯ ಶುಲ್ಕ ಕಟಿಸಿಕೊಂಡು ಹೆಚ್ಚಿನ ಹಣ ಪಡೆಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸದಸ್ಯರೆ ಮಾಲೀಕರಾದ ಸಹಕಾರ ಸಂಘಗಳಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟುಕೊಂಡು ಸಾಲ ನೀಡಲು ಮುಂದೆ ಬಂದರೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಬಸವರಾಜ ವಾಲಿ ಮಾತನಾಡಿ, ಚಿನ್ನಾಭರಣಗಳ ಮೇಲೆ ಯಾವುದೇ ರೀತಿಯ ಕಾಗದ-ಪತ್ರಗಳಿಗೆ ಅಲೆದಾಡಬೇಕಾಗಿಲ್ಲ. ಕೇವಲ ಒಂದು ರೂ. ಮಾಸಿಕ ಬಡ್ಡಿದರದಲ್ಲಿ ತಕ್ಷಣವೇ ಸಾಲ ಸೌಲಭ್ಯ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕಡಗಂಚಿಮಠದ ಅನುಯಾಯಿಗಳಾದ ಮಲ್ಲಯ್ನಾ ಮುತ್ಯಾ, ಸಂಘದ ಉಪಾಧ್ಯಕ್ಷ ಗುರುನಾಥ ಘೋಳನೂರ, ನಿರ್ದೇಶಕರಾದ ಪ್ರಭುರಾವ್ ಬಿರಾದಾರ, ರಾಜಶೇಖರ ಬಿರಾದಾರ, ರಾಜಶೇಖರ ಮುನ್ನಳ್ಳಿ, ಚಂದ್ರಕಾಂತ ಬಿರಾದಾರ ಮುಂತಾದವರಿದ್ದರು.