ಕುಕ್ಕೇಡಿ: ಮಕ್ಕಳ ಬಗೆಗೆ ಅಪಾರ ಪ್ರೀತಿ ಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರ, ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಮಕ್ಕಳಿಗೆ ಧೈರ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸ ಸಮಾಜದೆಲ್ಲೆಡೆ ಈ ದಿನ ಆಗಬೇಕು ಎಂದು ಲಯನ್ಸ್ ಕ್ಲಬ್ ವಲಯಾಧ್ಯಕ್ಷ ವೆಂಕಟೇಶ್ ಎಂ.ಬಿ. ಹೇಳಿದರು.
ಗ್ರಾಮ ಪಂಚಾಯತ್ ಕುಕ್ಕೇಡಿ, ಲಯನ್ಸ್ ಕ್ಲಬ್, ಕುಕ್ಕೇಡಿ-ನಿಟ್ಟಡೆ ಅಂಗನ ವಾಡಿ ಕೇಂದ್ರಗಳು ಹಾಗೂ ಊರವರ ಸಹಕಾರದೊಂದಿಗೆ ಇಲ್ಲಿನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಪ್ರಿಯಾ ರಾಜೇಶ್ ಮಾತನಾಡಿ, ಸಮಾಜದಲ್ಲಿ ಮಕ್ಕಳಿಗೆ ತಮ್ಮದೇ ಆದ ಹಕ್ಕು ಇದೆ. ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಜೀವಿಸುವ ಹಕ್ಕು, ಬೆಳವಣಿಗೆ ಹಾಗೂ ಅಭಿಪ್ರಾಯದ ಹಕ್ಕನ್ನು ಮಕ್ಕಳಿಂದ ಕಸಿಯುವ ಕೆಲಸ ನಡೆಯಬಾರದು ಎಂದರು.
ಕುಂಡದಬೆಟ್ಟು ಅಂಗನವಾಡಿಯಲ್ಲಿ ನಿರ್ಮಾಣ ಮಾಡಲಾದ ಮಕ್ಕಳ ಪಾರ್ಕನ್ನು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ವಿಮಲಾ ಉದ್ಘಾಟಿಸಿದರು.
ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿತೇಶ್ ಎಚ್., ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ಕುಕ್ಕೇಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಶ್ಮಿ ಬಿ.ಪಿ., ನಿವೃತ್ತ ಶಿಕ್ಷಕಿ ಲುಸಿಯಾ ರೋಡ್ರಿಗಸ್, ಸುನಂದ ಡಿ., ಪೃಥ್ವಿಕಾ, ಕುಕ್ಕೇಡಿ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಪ್ರಸ್ತಾವಿಸಿದರು. ಕುಕ್ಕೇಡಿ-ನಿಟ್ಟಡೆ ಗ್ರಾಮದ ಅಂಗನವಾಡಿ ಶಿಕ್ಷಕಿಯರು, ಸಹಾಯಕರು ಉಪಸ್ಥಿತರಿದ್ದರು.
ಸಮ್ಮಾನ
ಕುಂಡದಬೆಟ್ಟು ಅಂಗನವಾಡಿ ಕೇಂದ್ರ ಕಟ್ಟಡದ ಅಭಿವೃದ್ಧಿಗೆ ಸಹಕಾರ ನೀಡಿದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಗುತ್ತಿಗೆದಾರ ರಫೀಕ್ ಬೆಳ್ತಂಗಡಿ ಹಾಗೂ ರಾಮಕೃಷ್ಣ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ ಜಾನಕಿ ಸ್ವಾಗತಿಸಿ, ಜಯಂತ್ ಕೋಟ್ಯಾನ್ ವಂದಿಸಿದರು. ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳು ಹೂವಿನ ಮೊಗ್ಗಿನಂತೆ. ಅದನ್ನು ಅರಳಿಸುವ ಕೆಲಸ ನಮ್ಮದಾಗಬೇಕು. ಮಕ್ಕಳ ಪಠ್ಯ ಹಾಗೂ ಪಠ್ಯೇತರ
ಬೆಳವಣಿಗೆಗೆ ಸ್ಫೂರ್ತಿ ನೀಡುವ ಕೆಲಸ ಮಕ್ಕಳ ದಿನಾಚರಣೆ ದಿನ ಆಗಲಿ.
–
ಪ್ರಿಯಾ ರಾಜೇಶ್,
ಸಿಡಿಪಿಒ ಬೆಳ್ತಂಗಡಿ