Advertisement
ಭಾರತದ ಈಗಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಗಮನಿಸುವಾಗ ನಮಗೆ ಸ್ವಾತಂತ್ರ್ಯ ಸಿಕ್ಕಾಗ ಇದ್ದ ನೂರಾರು ಚಿಕ್ಕಪುಟ್ಟ ತುಂಡರಸರ ಅರಸೊತ್ತಿಗೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ನಾಯಕರು ದೂರಗಾಮಿ ಚಿಂತನೆ ನಡೆಸದೆ ಅವಸರದ ತೀರ್ಮಾನಕ್ಕೆ ಬಂದಂತೆ ಭಾಸವಾಗುತ್ತದೆ. ಒಂದು ಜ್ವಲಂತ ಉದಾಹರಣೆ ಎಂದರೆ ಕಾಶ್ಮೀರ. ಜಮ್ಮು-ಕಾಶ್ಮೀರವನ್ನು ಆಗ ಮಹಾರಾಜ ಹರಿಸಿಂಗ್ ಆಳುತ್ತಿದ್ದರು. ಆತ ಭಾರತದೊಡನೆ ವಿಲೀನಗೊಳ್ಳಲು ಉತ್ಸುಕನಾಗಿರಲಿಲ್ಲ. ಆದರೆ ಅಕ್ಟೋಬರ್ 26, 1947ರಂದು, ಪಾಕಿಸ್ತಾನದ ಪ್ರಚೋದನೆಯೊಂದಿಗೆ ಅಜಾದ್ ಕಾಶ್ಮೀರ ಸೇನೆ ದಾಳಿ ನಡೆಸಿದಾಗ ಮಹರಾಜ ಹರಿಸಿಂಗ್ ಭಾರತದ ಸಹಾಯ ಹಸ್ತಕ್ಕೆ ಕೈ ಚಾಚಿದ. ತಾನು ಭಾರತದೊಡನೆ ವಿಲೀನಗೊಳ್ಳಲು ಒಪ್ಪಿಗೆ ಸೂಚಿಸುವ ಕರಾರು ಪತ್ರಕ್ಕೆ ಇತರ ತುಂಡರಸರಂತೆ ಸಹಿ ಹಾಕಿದ. ಪರಿಣಾಮವಾಗಿ ಭಾರತೀಯ ಸಂವಿಧಾನದ ಪ್ರಥಮ ಶೆಡ್ನೂಲ್‌ನಲ್ಲಿ ಉಲ್ಲೇಖಗೊಂಡ ಪಾರ್ಟ್ ಬಿ ರಾಜ್ಯಗಳ ಪಂಕ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರ್ಪಡೆಗೊಂಡಿತು.
Related Articles
Advertisement
ಆರ್ಟಿಕಲ್ 370ರ ಬಲದಲ್ಲಿ ಕಾಶ್ಮೀರ ತನ್ನದೇ ಆದ ಒಳಾಡಳಿತ ಸೂತ್ರವನ್ನು ರೂಪಿಸಿಕೊಂಡರೂ, ವಿಲೀನದ ಒಪ್ಪಂದದಂತೆ ಸೇನೆ, ವಿಶ್ವ ವ್ಯವಹಾರ ಹಾಗೂ ದೂರ ಸಂವಹನ ವ್ಯವಸ್ಥೆಗಳು ಭಾರತ ಸರಕಾರದ ಸ್ವಾಮ್ಯದಲ್ಲಿಯೇ ಇದೆ. ಈ ಆದೇಶ 1950ರಲ್ಲಿಯೇ ಅಧಿಕೃತಗೊಂಡಿದೆ. ಅನಂತರ ಭಾರತ ಸರಕಾರ ಹಾಗೂ ಕಾಶ್ಮೀರ ಸರಕಾರದ ನಡುವೆ ಭಾರತೀಯ ಸಂವಿಧಾನದ ವ್ಯಾಪ್ತಿಯನ್ನು ಕಾಶ್ಮೀರ ರಾಜ್ಯದಲ್ಲಿ ವಿಸ್ತರಿಸುವ ಕುರಿತಾದ ಅನೇಕ ಒಪ್ಪಂದಗಳು, ಕೊನೆಯದಾಗಿ 1986ರ ತನಕವೂ ನಡೆದಿದೆ. ಈಗ ಕೇವಲ ಜಮ್ಮು ಮತ್ತು ಕಾಶ್ಮೀರದ ಒಳಾಡಳಿತಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ಆ ಸರಕಾರ ಸ್ವತಂತ್ರವಾಗಿದ್ದು ಅದರ ಬಲದಲ್ಲಿ ಉಗ್ರರನ್ನು ಪೋಷಿಸುವ ಕೆಲಸ ಗುಪ್ತವಾಗಿ ಮಾಡುತ್ತಿದೆ. ಈ ನಿಲುವಿಗೆ ಆರ್ಟಿಕಲ್ 370 ಸಹಕಾರಿ. ಇದರ ಮಹತ್ವವೇ ವಿಶೇಷ ಸ್ಥಾನಮಾನ. ಭಾರತ ಸರಕಾರಕ್ಕೆ ಈ ವಿದೇಯಕವನ್ನು ರದ್ದು ಪಡಿಸುವ ಹಕ್ಕಿದೆ.
ಏಕೆಂದರೆ ವಿಲೀನ ಒಪ್ಪಂದದ ಪ್ರಕಾರ ಭಾರತದ ವ್ಯಾಪ್ತಿಯೊಳಗೆ ಜಮ್ಮು ಮತ್ತು ಕಾಶ್ಮೀರ ಭೌತಿಕವಾಗಿ ಈಗಾಗಲೇ ಸೇರ್ಪಡೆಗೊಂಡಿದೆ. ಈಗಿರುವ ಸ್ವಾಯತ್ತೆಯನ್ನು ಮುಂದುವರಿಸಬೇಕಾದ ಅಗತ್ಯವಿರುವುದಿಲ್ಲ. ಈ ಸ್ವಾಯತ್ತೆ, ಭಾರತ ಸಂವಿಧಾನದ ಪರಿಚ್ಛೇದ 370ರ ಬಲದಲ್ಲಿ ಮುಂದುವರಿಯುತ್ತಿದೆ. ಅಖಂಡ ಭಾರತದ ಹಿತದೃಷ್ಟಿಯಿಂದ ಈ ವಿಧೇಯಕವನ್ನು ರದ್ದುಪಡಿಸುವುದೇ ಕ್ಷೇಮ.
ಸಂವಿಧಾನದ ಪರಿಚ್ಛೇದ 368ರಲ್ಲಿ ಸಂವಿಧಾನದ ಯಾವುದೇ ಪರಿಚ್ಛೇದಗಳನ್ನು ತಿದ್ದುಪಡಿ ಮಾಡುವ, ಕೆಲವು ಅಂಶಗಳನ್ನು ಸೇರ್ಪಡೆಗೊಳಿಸುವ ಹಾಗೂ ಸಂಪೂರ್ಣ ತೊಡೆದು ಹಾಕುವ ಅಧಿಕಾರ ಕೇಂದ್ರ ಸರಕಾರಕ್ಕೆ ದತ್ತವಾಗಿದೆ. ಆದರೆ ಈ ಬಗ್ಗೆ ಕೆಲವು ವಿಧಿವಿಧಾನಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಮುಖ್ಯವಾದುದು ಮೂರನೇ ಎರಡು ಬಹುಮತ. ಈ ಪ್ರಸ್ತಾಪ ಸದನದಲ್ಲಿ ಪರಿಗಣನೆಗೆ ಬಂದಾಗ ಸದನದಲ್ಲಿ ಉಪಸ್ಥಿತ ಸದಸ್ಯರಲ್ಲಿ ಮೂರನೇ ಎರಡು ಭಾಗ ಸದಸ್ಯರು ಸಮ್ಮತಿ ಸೂಚಿಸಬೇಕಾಗುತ್ತದೆ. ಪಕ್ಷಭೇದವನ್ನು ಮರೆತು ಒಮ್ಮತದ ಅಭಿಪ್ರಾಯ ಸೂಚಿಸಲು ಈಗ ಕಾಲ ಪಕ್ವವಾಗಿದೆ ಎಂಬ ಹಾಗೆ ವಿದ್ಯಮಾನ ಗೋಚರಿಸುತ್ತದೆ.
ಮೊನ್ನೆ ಕಾಶ್ಮೀರದಲ್ಲಿ ನಡೆದ ಜೈಶ್ ಮೊಹಮ್ಮದ್ ಉಗ್ರ ಸಂಘಟನೆಯ ಕುಟಿಲ ಕಾರಸ್ಥಾನದಿಂದ 40ಕ್ಕೂ ಅಧಿಕ ಸಂಖ್ಯೆಯ ಯೋಧರು ಮೃತಪಟ್ಟಿದ್ದಾರೆ. ಇನ್ನು ಅನೇಕ ಮಂದಿ ಸಾವು ಬದುಕಿನ ಹೋರಾಟದಲ್ಲಿದ್ದಾರೆ. ದೇಶದ ಸಮಸ್ತ ಪ್ರಜೆಗಳು ದಿಗ½ಮೆಗೊಳಗಾಗಿದ್ದಾರೆ. ವಿಶ್ವವೇ ನಿಬ್ಬೆರಗಾಗಿ ಭಾರತದ ಪಾಲಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದಾವೆ. ಈ ನಡುವೆ ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಪûಾತೀತವಾಗಿ ಉಗ್ರರ ನಿಗ್ರಹದಲ್ಲಿ ಕೈ ಜೋಡಿಸುವುದಾಗಿ ಅಭಯ ಹಸ್ತ ಚಾಚಿವೆ. ಅದರಲ್ಲಿಯೂ ಮುಖ್ಯವಾಗಿ ಎನ್‌ಡಿಎ ಸರಕಾರ ಮಾಡಿದ್ದೆಲ್ಲವನ್ನು ಸದಾ ಖಂಡಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮುಕ್ತ ಮನಸ್ಸಿನಿಂದ ಉಗ್ರ ನಿಗ್ರಹದ ಕ್ರಮಗಳಿಗೆ ಕೈ ಜೋಡಿಸುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಭಾರತಕ್ಕೆ ಕಂಟಕಪ್ರಾಯವಾಗಿರುವ ಉಗ್ರರ ಆಶ್ರಯದಾಣ ಜಮ್ಮು ಮತ್ತು ಕಾಶ್ಮೀರಕ್ಕೆ ಅನುಚಿತ ಬಲವನ್ನು ನೀಡುವ ಆರ್ಟಿಕಲ್ 370ನ್ನು ರದ್ದುಪಡಿಸಲು ಇದು ಸಕಾಲ.
ಪ್ರಸಕ್ತ ಲೋಕಸಭೆ ಇನ್ನು ವಿಸರ್ಜನೆಯಾಗಿಲ್ಲ. ಸದ್ಯೋಭವಿಷ್ಯದಲ್ಲಿ ಚುನಾವಣೆಯಾಗಬಹುದು. ಅದಕ್ಕೆ ಮುನ್ನ ವಿಶೇಷ ಅಧಿವೇಶನ ಕರೆದು ಆರ್ಟಿಕಲ್ 370ರ ರದ್ದತಿಯ ಪ್ರಸ್ತಾಪವನ್ನು ಮಂಡಿಸಿ ಎಲ್ಲಾ ವಿರೋಧ ಪಕ್ಷಗಳ ಸಹಮತವನ್ನು ಪಡೆದು ಬಹುಮತದ ಮೂಲಕ ಆರ್ಟಿಕಲ್ 370ರ ರದ್ದತಿಗೆ ಪ್ರಯತ್ನ ಮಾಡಲು ಈಗ ಕಾಲ ಪಕ್ವವಾಗಿದೆ.
ಬೇಳೂರು ರಾಘವ ಶೆಟ್ಟಿ