Advertisement

ಎಲ್ಲ ಜ್ಞಾನ ಶಿಸ್ತುಗಳೂ ಭಾರತೀಯ ಭಾಷೆಗಳಲ್ಲಿ ಸಿಗಲಿ

03:31 PM Jul 22, 2022 | Team Udayavani |

ಬೆಳಗಾವಿ: ಭಾಷೆ ಎನ್ನುವುದು ಅನನ್ಯತೆಯ ಕುರುಹು. ಭಾರತವು ಅನೇಕ ಭಾಷೆಗಳ ಸಂಗಮಸ್ಥಾನವಾಗಿದೆ. ಆಯಾ ಭಾಷೆಗಳೇ ಆಯಾ ಸ್ಥಳೀಯ ಅನನ್ಯತೆಗಳನ್ನು ಗುರುತಿಸುತ್ತವೆ. ಭಾರತೀಯ ಭಾಷೆಗಳ ರಕ್ಷಣೆ ಶಿಕ್ಷಕರ ಮೇಲಿದೆ. ಎಲ್ಲ ಜ್ಞಾನ ಶಿಸ್ತುಗಳೂ ಭಾರತೀಯ ಭಾಷೆಗಳಲ್ಲಿ ಸಿಗುವಂತಾಗಬೇಕು ಎಂದು ಕೇಂದ್ರೀಯ ಶಿಕ್ಷಣ ಮಂಡಳದ ಮತ್ತು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಅಧ್ಯಕ್ಷ ಅನಿಲ ಜೋಶಿ ಹೇಳಿದರು.

Advertisement

ಇಲ್ಲಿಯ ಎಸ್‌.ಕೆ.ಇ. ಶಿಕ್ಷಣ ಸಂಸ್ಥೆಯ ರಾಣಿ ಪಾರ್ವತಿದೇವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸ್ವಾತಂತ್ರ್ಯೋತ್ತರ ಹಿಂದಿ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಭಾವನೆಗಳು ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಿ ಕಂಪನಿಗಳು ತಮ್ಮ ವಿದೇಶಿ ಭಾಷೆಗಳನ್ನು ವ್ಯವಹಾರದ ನೆಪದಲ್ಲಿ ಪ್ರಸಾರ ಮಾಡುತ್ತಿವೆ. ನಾವು ಎಚ್ಚೆತ್ತುಕೊಂಡು ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಭಾರತೀಯ ಭಾಷೆಗಳಲ್ಲಿಯೇ ಪಠ್ಯಕ್ರಮ ರೂಪಿತವಾಗಬೇಕಾಗಿದೆ ಎಂದರು.

ಪ್ರತೀ ದೇಶ ಮತ್ತು ಸಮಾಜ ತನ್ನ ಸಾಹಿತ್ಯದ ಪುನರಾವಲೋಕನ ಮಾಡಿಕೊಳ್ಳಬೇಕು. ಆಗ ನಮ್ಮ ಅಸ್ಥಿತ್ವಕ್ಕೆ ಶಾಶ್ವತ ನೆಲೆಗೆ ಕಾರಣವಾದ ಸಂಗತಿಗಳು ಮನನವಾಗುತ್ತವೆ. ಈ ಹಿನ್ನೆಲೆಯಲ್ಲಿ ಹಿಂದಿ ಸಾಹಿತ್ಯವು ರಾಷ್ಟ್ರಾಭಿಮಾನಕ್ಕೆ, ರಾಷ್ಟ್ರೀಯತೆಗೆ ಬಹುಮುಖ್ಯ ಕೊಡುಗೆಯನ್ನು ನೀಡಿದೆ. ಇಂಥ ಕೊಡುಗೆಗೆ ಜಯಶಂಕರ ಪ್ರಸಾದ, ರಾಮಚರಣ ಗುಪ್ತಾ, ಚತುರ್ವೇದಿ, ನಿರಾಲಾ ಮೊದಲಾದವರು ಕಾರಣರಾಗಿದ್ದಾರೆ. ಪ್ರತಿಶೋಧ ಮತ್ತು ವಿದ್ರೋಹದ ಸಾಹಿತ್ಯವನ್ನು ನೀಡಿದ ಈ ಮಹನೀಯರು ರಾಷ್ಟ್ರೀಯ ಏಕತೆಗೆ ಮತ್ತು ಅನನ್ಯತೆಗೆ ದುಡಿದಿದ್ದಾರೆ ಎಂದು ಹೇಳಿದರು.

ಆಗ್ರಾದ ಹಿಂದಿ ಸಂಸ್ಥಾನದ ಸಂಚಾಲಕರಾದ ಪ್ರಾಧ್ಯಾಪಕಿ ಬೀನಾ ಶರ್ಮಾ ಮಾತನಾಡಿ, ನಮ್ಮ ರಾಷ್ಟ್ರೀಯ ಆಚರಣೆಗಳು ಕೇವಲ ಸಾಂಕೇತಿಕ ಕಾರ್ಯಗಳಾಗದೇ ಭಾವ ಶೃದ್ಧೆ, ಆಸ್ಥೆಗಳ ಮೂಲಕ ನಡೆದು ನಾವು ದೇಶಾಭಿಮಾನಿಗಳಾಗಬೇಕು ಎಂದರು.

ಬೆಂಗಳೂರಿನ ಡಿ.ಆರ್‌.ಡಿ.ಓ ದ ವಿಜ್ಞಾನಿ ರಾಜು ನವಿಂದಗಿ ಮಾತನಾಡಿ ಹೆಚ್ಚು ಭಾಷೆಗಳು ಬಂದಷ್ಟು ಮನುಷ್ಯನ ಬುದ್ಧಿ ಶಕ್ತಿ ಪಕ್ವವಾಗುತ್ತದೆ. ತಾಂತ್ರಿಕ ಭಾಷೆ ಲುಪ್ತವಾಗಬಹುದು, ಆದರೆ ಮನುಷ್ಯನ ಭಾಷೆ ದಿನದಿನವೂ ಉಕ್ಕುತ್ತದೆ, ಬೆಳೆಯುತ್ತದೆ. ಹೀಗಾಗಿ ಪ್ರತಿ ಭಾಷೆಗಳು ಮಹತ್ವದ್ದಾಗಿವೆ. ಭಾಷೆ ದೇಶವನ್ನು ಒಡೆಯಬಾರದು, ಕೂಡಿಸಬೇಕು. ಸಾಹಿತ್ಯ, ಮನರಂಜನೆ, ಮಾಧ್ಯಮಗಳು ಭಾಷಾ ಸಂವರ್ಧನೆಯ ಕೆಲಸ ಮಾಡುತ್ತಿವೆ. ಸಂಸ್ಕೃತಿ ನಿರ್ಮಾಣದಲ್ಲಿ ಹಿಂದಿ ಭಾಷೆಯ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ರಾಣಿ ಪಾರ್ವತಿ ದೇವಿ ಕಾಲೇಜಿನ ಪ್ರಾಚಾರ್ಯೆ ಡಾ. ಅನುಜಾ ನಾಯಕ ಅವರು, ಭಾರತೀಯ ರಾಷ್ಟ್ರೀಯತೆಗೆ ನಮ್ಮ ನಾಯಕರ, ಕವಿ – ಸಾಹಿತಿಗಳ ಕೊಡುಗೆ ವಿಶಿಷ್ಟವಾಗಿದೆ. ಭಾಷೆ, ದೇಶ ಪ್ರೇಮದ ಹಿನ್ನೆಲೆಯಲ್ಲಿ ಈ ಸಂಕಿರಣವು ತುಂಬ ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಮಲಾಕಾಂತ ತ್ರಿಪಾಠಿ, ಪ್ರಾ| ಅರುಣಾ ನಾಯಕ, ಡಾ| ಜಯಶಂಕರ ಯಾದವ್‌, ಡಾ| ಎಸ್‌. ಎ. ಮಂಜುನಾಥ, ಪ್ರೋ| ಎಸ್‌.ವೈ. ಪ್ರಭು, ಡಾ| ವಿನಯಕುಮಾರ ಯಾದವ್‌ ಪಾಲ್ಗೊಂಡಿದ್ದರು.

ನೂಪುರ ರಾನಡೆ ಅವರು ಸ್ವಾಗತ ಗೀತೆ ಹಾಡಿದರು. ಸಂಕಿರಣದ ಸಂಚಾಲಕ ಡಾ| ರಾಜೇಂದ್ರ ಪೋವಾರ ಸ್ವಾಗತಿಸಿದರು. ಡಾ| ಎಸ್‌.ಎ. ಮಂಜುನಾಥ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ| ವಿನಯಕುಮಾರ ಯಾದವ್‌ ವಂದಿಸಿದರು. ಡಾ| ದೀಪಾ ಅಂಟಿನ, ಪ್ರೋ| ಪರಸು ಗಾವಡೆ ನಿರೂಪಿಸಿದರು. ರಾಣಿ ಪಾರ್ವತಿದೇವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿಂದಿ ವಿಭಾಗ, ಕೇಂದ್ರಿಯ ಹಿಂದಿ ಸಂಸ್ಥಾನ ಆಗ್ರಾ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜ್‌ ಹಿಂದಿ ಪ್ರಾಧ್ಯಾಪಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next