Advertisement

ಕಾಡಿನ ಅಂಚಿನ ಮಕ್ಕಳಿಗೆ ನಾಡಿನ ಮಕ್ಕಳಿಂದ ಪಾಠ

11:56 AM Aug 03, 2018 | Team Udayavani |

ಮಹಾನಗರ: ಅದೊಂದು ಕಾಡಿನ ನಡುವೆ ಇರುವ ಶಾಲೆ. ಅಲ್ಲಿನ ವಿದ್ಯಾರ್ಥಿಗಳಿಗೆ ಸಿಟಿ ಲೈಫ್‌ ಹೊಸತು. ನಗರದ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯುತ್ತಾರೆ ಎಂಬ ಕುತೂಹಲ ಅವರಲ್ಲಿತ್ತು. ಸಿಟಿ ಮಕ್ಕಳಂತೆ ಶಿಕ್ಷಣ ಪಡೆದು ದೊಡ್ಡ ಹುದ್ದೆ ಅಲಂಕರಿಸಬೇಕೆಂಬ ಆಸೆ ಕಣ್ಣಂಚಲ್ಲಿತ್ತು. ಇದೀಗ ಕಾಡಿನ ಮಕ್ಕಳಲ್ಲಿ ಅವರ ಪ್ರತಿಭೆಯನ್ನು ಮತ್ತಷ್ಟು ವೃದ್ಧಿಸುವ ಕೆಲಸವನ್ನು ನಾಡಿನ ಮಕ್ಕಳು ಮಾಡಿ ಬಂದಿದ್ದಾರೆ.

Advertisement

ಇದಕ್ಕೆ ಕಾರಣವಾದದ್ದು ದಿನೇಶ್‌ ಹೊಳ್ಳ ನೇತೃತ್ವದ ‘ಸಹ್ಯಾದ್ರಿ ಸಂಚಯ’ ಮತ್ತು ಗೋಪಾಡ್ಕರ್‌ ನೇತೃತ್ವದ ‘ಸ್ವರೂಪ ಅಧ್ಯಯನ ಕೇಂದ್ರ’ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು. ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಇತ್ತೀಚೆಗೆ ಕಾಡಿಗೆ ತೆರಳಿ ಅಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ‘ಕಾಡುವ ಶಿಕ್ಷಣ’ ಎಂಬ ಹೆಸರಿನ ವಿನೂತನ ಶಿಬಿರವನ್ನು ಹಮ್ಮಿಕೊಂಡಿದ್ದರು. ಇದರ ಮೂಲಕ ಅಡವಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದರು. ಅರಣ್ಯಾಧಿಕಾರಿಯಾಗುವವನು ಕಾಡಿನಲ್ಲಿಯೇ ಹುಟ್ಟಿ ಬೆಳೆದವನಾಗಿರಬೇಕು. ಆತನಿಗೆ ಕಾಡಿನ ಇಂಚಿಂಚೂ ಮಾಹಿತಿ ತಿಳಿದಿರಬೇಕು ಎಂಬುವುದು ಈ ತಂಡದ ಆಶಯವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ದಾಂಡೇಲಿ ಅರಣ್ಯ ವ್ಯಾಪ್ತಿಯ ಜೋಯಿಡಾದ ಕಾಳೀ ಹುಲಿ ಸಂರಕ್ಷಿತ ವಲಯದಲ್ಲಿ ವಿರ್ನೋಲಿ, ಹುಡಸಾ, ದನಗರ, ಬಾಪೇಲಿ ಮುಂತಾದ ದಟ್ಟ ಅರಣ್ಯಗಳ ನಡುವೆ ಇರುವಂತಹ ಶಾಲೆಯನ್ನು ಆಯ್ದು ಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಜತೆಗೆ ಐದು ದಿನದ ಕ್ಯಾಂಪ್‌ ನಡೆಸುವ ಮೂಲಕ ಸಿಟಿ ಮಕ್ಕಳು ಕಾಡಿನ ಮಕ್ಕಳ ಜತೆ ಒಂದಾದರು.

ವಿವಿಧ ಚಟುವಟಿಕೆಗಳ ಪಾಠ
ಅರಣ್ಯ ಪ್ರದೇಶಗಳಲ್ಲಿ ಶಾಲೆಗಳಿರುವ ಕಾರಣದಿಂದಾಗಿ ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಆಯ್ದುಕೊಂಡ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಲ್ಲಿನ ಮಕ್ಕಳಿಗೆ ಚಿತ್ರಕಲೆ, ಸಂಗೀತ, ನೃತ್ಯ, ಮಿಮಿಕ್ರಿ, ಪೇಪರ್‌ ಕ್ರಾಪ್ಟ್, ಬೀಟ್‌ಬಾಕ್ಸ್‌, ಮುಖವಾಡ ತಯಾರಿ, ಗೊಂಬೆ ತಯಾರಿ ಮುಂತಾದ ಪ್ರಕಾರಗಳನ್ನು ಬೋಧಿಸಿದರು. ಇದಲ್ಲದೆ ಸ್ಮರಣ ಶಕ್ತಿಯಿಂದ ಇಡೀ ಪಾಠ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಸರಳವಾಗಿ ಕಲಿಯಬಹುದು ಎಂಬುವುದನ್ನು ಕಾಡಿನ ಮಕ್ಕಳಿಗೆ ಹೇಳಿಕೊಟ್ಟರು.

ವನ್ಯಜೀವಿಗಳ ಅಧ್ಯಯನ
ಕಾಡಿನ ಮಕ್ಕಳಿಗೆ ನಾಡಿನ ಅಧ್ಯಯನ ಯಾವ ರೀತಿ ಹೊಸತೋ, ಅದೇ ರೀತಿ ನಾಡಿನ ಮಕ್ಕಳಿಗೆ ಕೂಡ ಕಾಡಿನ ಪರಿಸರ ಹೊಸತು. ಇದೇ ಕಾರಣಕ್ಕೆಂದು ಶಿಬಿರದ ಜತೆಗೆ ಕಾಳಿ ಹಿನ್ನೀರು ಪ್ರದೇಶಕ್ಕೆ ಭೇಟಿ, ಜೋಯಿಡಾ ಅಡವಿ ಚಾರಣ, ವನ್ಯ ಜೀವಿಗಳ ಅಧ್ಯಯನ, ಸಿದ್ದಿ, ಹಾಲಕ್ಕಿ, ಕುಡುಬಿ, ಗೌಳಿ ಬುಡಕಟ್ಟು ಜನಾಂಗದವರ ವಾಡೆಗಳಿಗೆ ಭೇಟಿ, ಗದ್ದೆ ಕೆಸರಿನ ಆಟ, ಜೇನು ಬದುಕಿನ ತಿಳುವಳಿಕೆ, ಪಶ್ಚಿಮ ಘಟ್ಟದ ಮಹತ್ವದ ಔಷಧೀಯ ಸಸ್ಯಗಳ ಮಾಹಿತಿ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಹಾಯವಾಯಿತು.

Advertisement

ಮಾಹಿತಿ ವಿನಿಮಯ
ಅಡವಿ ಮಕ್ಕಳು ನಮ್ಮನ್ನು ನೋಡುವಾಗ ಹೆದರುತ್ತಿದ್ದರು. ನಾವು ತಂಡವನ್ನು ಕಟ್ಟಿ ಅವರಿಗೆ ನೃತ್ಯ, ಆಟ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕಲಿಸಿದೆವು. ಆ ಬಳಿಕ ಅವರು ಕೂಡ ನಮ್ಮ ಜತೆ ಬೆರೆಯಲು ಪ್ರಾರಂಭಿಸಿದರು. ನಾವು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡೆವು.
 - ರಾಹುಲ್‌,
ಸ್ವರೂಪ ಅಧ್ಯಯನ ಕೇಂದ್ರದ ಪಿಯುಸಿ ವಿದ್ಯಾರ್ಥಿ

ಚೆನ್ನಾಗಿ ಬೆರೆತರು
ಕಾಡಿನ ಮಕ್ಕಳು ನಗರದ ಮಕ್ಕಳನ್ನು ನೋಡಿದಾಗ ಒಮ್ಮೆಲೇ ವಿಚಲಿತರಾದರು. ಆದರೆ ಚೆನ್ನಾಗಿ ಬೆರೆತರು. ಕಾಡಿನ ಮೂರು ಶಾಲೆಗಳಲ್ಲಿ ಶಿಬಿರವನ್ನು ಆಯೋಜಿಸಿದ್ದೆವು. ಸುಮಾರು ನಮ್ಮ ಶಿಕ್ಷಣ ಸಂಸ್ಥೆಯ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೆ, ಪರಿಸರ ಹೋರಾಟಗಾರ್ತಿ, ಜಾನಪದ ವಿದ್ವಾಂಸೆ ಸುಕ್ರಿಬೊಮ್ಮ ಗೌಡ ಅವರನ್ನು ಕೂಡ ಭೇಟಿಯಾಗುವ ಅವಕಾಶ ನಮಗೆ ದೊರಕಿತ್ತು.
– ಗೋಪಾಡ್ಕರ್‌, ಸ್ವರೂಪ ಶಿಕ್ಷಣ ಸಂಸ್ಥೆ ನಿರ್ದೇಶಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next