ಬೆಂಗಳೂರು: ಕಚೇರಿಯಲ್ಲಿ ಕುಳಿತು ಆಡಳಿತಾತ್ಮಕ ನೋಡಿಕೊಂಡಿರುತ್ತೇವೆ ಎನ್ನುತ್ತಿದ್ದ ಅಧಿಕಾರಿಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಶಾಕ್ ನೀಡಿದೆ. ಕಚೇರಿ ಕೆಲಸದ ಜತೆಗೆ ವಾರಕ್ಕೆ 6 ಗಂಟೆ ಕಡ್ಡಾಯವಾಗಿ ಸಮೀಪದ ಕಾಲೇಜಿನಲ್ಲಿ ಬೋಧನೆ ಮಾಡಬೇಕು ಎಂದು ಇಲಾಖೆ ಆದೇಶ ಮಾಡಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ತಳಮಳ ಆರಂಭವಾಗಿದೆ.
ಬೆಂಗಳೂರು ಸಹಿತ ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಕಲಬುರಗಿಯ ಜಂಟಿ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷಾಧಿಕಾರಿ, ಸಮನ್ವಯಾಧಿಕಾರಿ, ನೋಡಲ್ ಅಧಿಕಾರಿಗಳನ್ನು ಬೋಧನೆಗೆ ನಿಯೋಜಿಸಲು ತಿಳಿಸಲಾಗಿದೆ.
ಅಧಿಕಾರಿಗಳು ವಾರಕ್ಕೆ 6 ಗಂಟೆ ಕಡ್ಡಾಯವಾಗಿ ಬೋಧನೆ ಮಾಡುವುದರ ಜತೆಗೆ ಇಲಾಖೆಯಿಂದ ತಮಗೆ ವಹಿಸಿರುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ ಮತ್ತು ಬೋಧನೆಯ ಹೆಸರಿನಲ್ಲಿ ಸಮಯದ ಅಪವ್ಯಯ ಮಾಡದಂತೆಯೂ ನಿರ್ದೇಶಿಸಿದೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಸರಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜಿನ ಬೋಧಕ ಸಿಬಂದಿ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗಳಲ್ಲಿ ವಿಶೇಷಾಧಿಕಾರಿ, ಸಮನ್ವಯಾಧಿಕಾರಿ, ನೋಡಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಸಿಬಂದಿಯು ಸದ್ಯ ನಿರ್ವಹಿಸುತ್ತಿರುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯದ ಜತೆಗೆ ವಾರಕ್ಕೆ 6 ಗಂಟೆ ಸಮೀಪದ ಕಾಲೇಜಿನಲ್ಲಿ ಬೋಧನ ಕಾರ್ಯ ಮಾಡಬೇಕು. ಎಂಟು-ಹತ್ತು ವರ್ಷಗಳಿಂದ ಬೋಧನ ವೃತ್ತಿಯನ್ನು ಬಿಟ್ಟು, ಕಚೇರಿಯ ಆಡಳಿತಾತ್ಮಕ ಕಾರ್ಯದಲ್ಲಿ ತಲ್ಲೀನರಾಗಿದ್ದ ಅಧಿಕಾರಿಗಳು ಇನ್ನು ಮುಂದೆ ತಮ್ಮ ಇಚ್ಛೆಯ ವಿಷಯ ವನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲೇಬೇಕು.
ಕೌಶಲ ವೃದ್ಧಿಯ ಉದ್ದೇಶ
ಕಚೇರಿಯಲ್ಲಿ ಸೇವೆ ಸಲ್ಲಿಸು ತ್ತಿರುವ ಅಧಿಕಾರಿಗಳು ಬೋಧನ ಕೌಶಲವನ್ನು ಕಳೆದುಕೊಳ್ಳುತ್ತಿರುವುದನ್ನು ಮನಗಂಡ ಇಲಾಖೆಯ ಹಿರಿಯ ಅಧಿಕಾರಿಗಳು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅಧಿಕಾರಿಗಳ ಬೋಧನ ಕೌಶಲ ವೃದ್ಧಿಯ ಜತೆಗೆ ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜಿನ ಉಪನ್ಯಾಸಕರ ಕೊರತೆ ಯನ್ನು ನಿವಾರಿಸುವ ಉದ್ದೇಶ ಹೊಂದಿದೆ.