Advertisement

ಸಂಪರ್ಕ ಕಡಿತ: ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಇಳಿಕೆ

04:15 AM Aug 22, 2018 | Team Udayavani |

ಬೆಳ್ತಂಗಡಿ/ ಸುಬ್ರಹ್ಮಣ್ಯ/ಕೊಲ್ಲೂರು: ರಾಜ್ಯದ ಬಹುತೇಕ ಜಿಲ್ಲೆಗಳಿಂದ ಕರಾವಳಿ ಜಿಲ್ಲೆ ಸಂಪರ್ಕಿಸುವ ಇಲ್ಲಿನ ಘಾಟಿ ರಸ್ತೆಗಳು ಭಾರೀ ಮಳೆಗೆ ತುತ್ತಾಗಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಾರದ ಎಲ್ಲ ದಿನಗಳಲ್ಲೂ ಭಕ್ತರಿಂದ ತುಂಬಿ ತುಳುಕುವ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಮೊದಲಾದ ದೇವಸ್ಥಾನಗಳು ಈಗ ಖಾಲಿ ಖಾಲಿಯಾಗಿವೆ. ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ದೇವರ ದರ್ಶನವೂ ಬೇಗ ಸಿಗುತ್ತಿದೆ. ಸ್ಥಳೀಯ ಭಕ್ತರಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಮೈಸೂರು-ಮಡಿಕೇರಿ ಭಾಗದಿಂದ ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟಿ ರಸ್ತೆ ಪೂರ್ಣ ಕುಸಿದಿದ್ದು, ಶಿರಾಡಿ ರಸ್ತೆಯಲ್ಲೂ ಸಂಚಾರ ನಿಷೇಧವಿದೆ. ಸದ್ಯಕ್ಕೆ ಚಾರ್ಮಾಡಿ ರಸ್ತೆ ಮಾತ್ರ ತೆರೆದಿದೆ. ಭೂಕುಸಿತ, ಟ್ರಾಫಿಕ್‌ ಜಾಮ್‌, ಸುತ್ತು ಬಳಸು ದಾರಿ ಇತ್ಯಾದಿ ಕಾರಣಗಳಿಂದ ಯಾತ್ರಿಕರು ಕರಾವಳಿಯತ್ತ ಬರಲು ಹಿಂಜರಿಯುತ್ತಿದ್ದಾರೆ.

Advertisement

ಗಣನೀಯ ಇಳಿಕೆ
ಧರ್ಮಸ್ಥಳ ಕ್ಷೇತ್ರದ ಮೂಲಗಳ ಪ್ರಕಾರ ಕ್ಷೇತ್ರಕ್ಕೆ ಈ ಅವಧಿಯಲ್ಲಿ ನಿತ್ಯ 8ರಿಂದ 9 ಸಾವಿರ ಭಕ್ತರು ಆಗಮಿಸುತ್ತಾರೆ. ಸೋಮವಾರ ಮತ್ತು ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ 15 ಸಾವಿರ ದಾಟುತ್ತದೆ. ಆದರೆ ಪ್ರಸ್ತುತ ಒಂದರಿಂದ ಎರಡು ಸಾವಿರ ಭಕ್ತರು ಆಗಮಿಸುತ್ತಿದ್ದು, ಸೋಮವಾರ ಸುಮಾರು 5 ಸಾವಿರ ಭಕ್ತರು ಆಗಮಿಸಿದ್ದರು.
ಕೇರಳದಲ್ಲಿ ಭಾರೀ ಜಲಪ್ರಳಯ ಸಂಭವಿಸಿರುವುದರಿಂದ ಅಲ್ಲಿನ ಭಕ್ತರೇ ಹೆಚ್ಚಾಗಿ ಬರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಬಹಳಷ್ಟು ವಿರಳವಾಗಿದೆ ಎಂದು ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಕುಕ್ಕೆ ಕ್ಷೇತ್ರ ಖಾಲಿ ಖಾಲಿ


ಭಕ್ತರಿಂದ ತುಂಬಿರುತ್ತಿದ್ದ ಕುಕ್ಕೆಯಲ್ಲೀಗ ಜನಜಂಗುಳಿಯಿಲ್ಲ. ಮಂಗಳವಾರ ದೇಗುಲದಲ್ಲಿ 47 ಸರ್ಪಸಂಸ್ಕಾರ, 2 ತುಲಾಭಾರ, 98 ಆಶ್ಲೇಷಾ ಬಲಿ, 15 ನಾಗಪ್ರತಿಷ್ಠೆ, 11 ಮಹಾಪೂಜೆ, 21 ಪಂಚಾಮೃತಾಭಿಷೇಕ, 53 ಕಾರ್ತಿಕೇಯ ಹಾಗೂ 79 ಶೇಷಸೇವೆಗಳು ನಡೆದಿವೆ. ಅನ್ನದಾನ ಸೇವೆಗೆ ಕೇವಲ 15 ಸಾವಿರ ರೂ. ಪಾವತಿಯಾಗಿದೆ. ಉಳಿದ ದಿನಗಳಿಗೆ ಹೋಲಿಸಿದರೆ ಸೇವೆಗಳ ಸಂಖ್ಯೆಯಲ್ಲಿ ಶೇ. 80ರಷ್ಟು ಕುಸಿತವಾಗಿದೆ.

ಸೀಯಾಳಾಭಿಷೇಕ
ಮಳೆ ಕಡಿಮೆಯಾಗಿ, ಸುಖ- ಶಾಂತಿ ಸಿಗಲೆಂದು ಪ್ರಾರ್ಥಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯದಲ್ಲಿ ಮಂಗಳವಾರ ಪ್ರಾತಃಕಾಲ 108 ಸೀಯಾಳಾಭಿಷೇಕ ಸೇವೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next