ಆಳಂದ: ಜಾತಿಯತೆ, ಮೇಲು ಕೀಳುಗಳಿಂದ ತಾಂಡಾವಾಡುತ್ತಿರುವ ಭಾರತದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಮಾಡಲು ಹೊರಡುವ ಮೊದಲು ಕಾಸ್ಟ್‌ಲೆಸ್ ಇಂಡಿಯಾ ನಿರ್ಮಾಣ (ಜಾತಿ ನಿರ್ಮೂಲನೆ), ಮಾಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಮಾಡಿಯಾಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕಾಸ್ಟ್‌ಲೆಸ್ ಪದ್ಧತಿ ಜಾರಿಯಿಂದ ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಂತಾಗುತ್ತದೆ ಎಂದು ಹೇಳಿದರು.
ಬಡವರಿಗೆ ವಿದ್ಯೆ ಸಿಕ್ಕಿಲ್ಲ. ಸಿಕ್ಕರೂ ಅದರಿಂದ ಹೊಟ್ಟೆ ತುಂಬುತ್ತಿಲ್ಲ. ಮಕ್ಕಳಲ್ಲಿ ಜಾತ್ಯತೀತ ಭಾವನೆ ತುಂಬಲು ಶಿಕ್ಷಕರ ಶ್ರಮವೂ ಅಗತ್ಯವಾಗಿದೆ. ವಿವೇಕಾನಂದರು, ಜ್ಯೋತಿಬಾ ಫುಲೆ, ಅಂಬೇಡ್ಕರ್, ಗಾಂಧೀಜಿಆದರ್ಶಗಳನ್ನು ಪಾಲಿಸುವ ಜತೆಗೆ ದೇಶದ ಭದ್ರತೆಗೆ ಒತ್ತು ನೀಡಲು ಯುವ ಶಕ್ತಿ ಸದೃಢವಾಗಬೇಕಾಗಿದೆ ಎಂದು ಹೇಳಿದರು.
ಸಹ ಶಿಕ್ಷಕ ಗಜಾನಂದ ಕುಂಬಾರ ಮಾತನಾಡಿ, ಆಡಂಬರ ಮತ್ತು ಅವೈಜ್ಞಾನಿಕ ನೀತಿಯಿಂದಾಗಿ ನಮ್ಮ ದೇಶ ಪ್ರಪಾತಕ್ಕೆ ಇಳಿಯುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಅನುಕರಿಸಬೇಕು ಎಂದು ಹೇಳಿದರು.
ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ಡಾ| ಸಂಜಯರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರತಿ ಇದ್ದರು. ಪ್ರಹ್ಲಾದ ಶಿಂಧೆ ಕಾರ್ಯಕ್ರಮ ನಿರೂಪಿಸಿದರು. ಶರಣಬಸಪ್ಪ ಹಕ್ಕಿ ವಂದಿಸಿದರು.