ಬೀದರ: ತಾಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವುದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲಿನ ಗ್ರಾಮ ಮತ್ತು ತಾಂಡಾ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.
ಒಂದು ವಾರದ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಪರಿಶೀಲಿಸಿದಾಗ ದೊಡ್ಡ ಚಿರತೆಯೊಂದು ಸಂಚರಿಸುತ್ತಿರುವುದು ದೃಢವಾಗಿದೆ. ತಾಲೂಕಿನ ಜನವಾಡಾ ಮತ್ತು ಈ ಹಿಂದೆ ಹೊನ್ನಿಕೇರಿ ಪ್ರದೇಶದಲ್ಲೇ ಒಂದು ವರ್ಷದ ಹಿಂದೆ ಪತ್ತೆಯಾಗಿದ್ದ ಚಿರತೆಯೇ ಇದಾಗಿದ್ದು, ಮರಿ ಈಗ ದೊಡ್ಡದಾಗಿದೆ. ಕಳೆದ ಐದು ತಿಂಗಳಿಂದ ಮಾನಿಟರ್ ಮಾಡಲಾಗುತ್ತಿತ್ತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ತಾಲೂಕಿನ ಜನವಾಡಾ ಸಮೀಪದಲ್ಲಿ ಪಾಳು ಬಿದ್ದಿರುವ ನೀರು ಶುದ್ಧೀಕರಣ ಘಟಕದಲ್ಲಿ ಚಿರತೆ ಇರುವುದು ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟಕದಲ್ಲಿ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಮೊದಲು ಕಾಡು ಪ್ರಾಣಿಯೆಂದು ಊಹಿಸಲಾಗಿದ್ದು, ನಂತರ ಕ್ಯಾಮೆರಾ ಚಿತ್ರ ಮತ್ತು ಹೆಜ್ಜೆ ಗುರುತುಗಳಿಂದ ಮರಿ ಚಿರತೆ ಇರುವುದು ಖಚಿತವಾಗಿತ್ತು. ನಂತರ ಕಳೆದ ಏಪ್ರಿಲ್ ತಿಂಗಳಲ್ಲಿ ಇದೇ ಚಿರತೆ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಕಂಡುಬಂದಿತ್ತು. ಆದರೆ, ಅರಣ್ಯ ಇಲಾಖೆಯ ಸತತ ಕಾರ್ಯಾಚರಣೆ ಬಳಿಕವೂ ಕೈಗೆ ಸಿಗದೆ ನಾಪತ್ತೆಯಾಗಿತ್ತು.
ಒಂದು ತಿಂಗಳು ಕಾಲ ಕ್ಯಾಮೆರಾದಲ್ಲಿ ಚಿರತೆ ಇರುವಿಕೆ ಬಗ್ಗೆ ಯಾವುದೇ ದಾಖಲಾಗದ ಹಿನ್ನಲೆ ಅದು ತನ್ನ ವಲಸೆ ಬಂದಿದ್ದ ಮೂಲ ಸ್ಥಳಕ್ಕೆ ಹೋಗಿರಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿತ್ತು. ಆದರೆ, ಈ ಪ್ರಾಣಿ ಅರಣ್ಯ ಪ್ರದೇಶದಲ್ಲೇ ನೆಲೆಸಿದ್ದು, ಜಿಂಕೆ ಅಥವಾ ಕಾಡು ಹಂದಿಗಳನ್ನು ತಿಂದು ಸಂಚರಿಸುತ್ತಿದೆ. ಈವರೆಗೆ ಜನರಿಗೆ ಮತ್ತು ಜಾನುವಾರುಗಳಿಗೆ ಹಾನಿಯನ್ನುಂಟು ಮಾಡಿರುವುದು ವರದಿಯಾಗಿಲ್ಲ.
ಚಿರತೆ ಇರುವಿಕೆ ದೃಢವಾಗುತ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಅದನ್ನು ಸೆರೆ ಹಿಡಿಯಲು ಕಾರ್ಯಾಚರಣೆಗೆ ಇಳಿದಿದೆ. ಕ್ಯಾಮೆರಾ ಚಿತ್ರದ ಪೋಸ್ಟರ್‌ಗಳನ್ನು ಗ್ರಾಮಗಳಲ್ಲಿ ಅಂಟಿಸಿ, ಡಂಗೂರ ಬಾರಿಸಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆತಂಕ ಬೇಡ, ಎಚ್ಚರಿಕೆ ವಹಿಸಬೇಕು. ಕಾಡಿನಲ್ಲಿ ಸೌದೆ ತರಲು ಯಾರು ಹೋಗಬಾರದು, ರಾತ್ರಿ ಸಮಯದಲ್ಲಿ ಅನಗತ್ಯವಾಗಿದೆ ಸಂಚರಿಸಬಾರದು ಎಂದು ಮನವಿ ಮಾಡಲಾಗಿದೆ ಎಂದು ವಾನತಿ ಎಂ.ಎಂ ಹೇಳಿದ್ದಾರೆ.
ಬೀದರ ತಾಲೂಕಿನ ಹೊನ್ನಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದ ಕ್ಯಾಮರಾ ಟ್ರ್ಯಾಪ್ ಚಿತ್ರಗಳನ್ನು ಪರಿಶೀಲಿಸಿದಾಗ ದೊಡ್ಡ ಚಿರತೆ ಸಂಚರಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಅರಣ್ಯದಲ್ಲಿ ಚಿರತೆಗಳಿವೆ ಎಚ್ಚರಿಕೆ ಎಂಬ ಫಲಕವನ್ನು ಈ ವಲಯದ ಗ್ರಾಮ ಮತ್ತು ರಸ್ತೆಗಳ ಬಳಿ ಹಾಕಲು ಸೂಚಿಸಲಾಗಿದೆ.
-ಈಶ್ವರ ಖಂಡ್ರೆ, ಅರಣ್ಯ ಸಚಿವ.