ಹುಣಸೂರು: ಸಾಕು ಪ್ರಾಣಿಗಳನ್ನು ಕೊಂದು ಜನ ಜಾನುವಾರುಗಳನ್ನು ಕಾಡುತ್ತಿದ್ದ 5 ವರ್ಷ ಪ್ರಾಯದ ಚಿರತೆಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಾಡಿಗನಹಳ್ಳಿಯ ಚಂದ್ರಶೇಖರ್ ಎನ್ನುವವರ ಜಮೀನಿನಲ್ಲಿ ಅರಣ್ಯ ಇಲಾಖೆಯು ಇರಿಸಿದ್ದ ಬೋನಿಗೆ ಸುಮಾರು ಐದು ವರ್ಷದ ಗಂಡು ಚಿರತೆ ಬಿದ್ದಿದೆ.
ಚಿಕ್ಕಾಡಿಗನಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಬೀದಿ ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ತಿಂದು ಹಾಕುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಸಂದೀಪ್ ನೇತೃತ್ವದಲ್ಲಿ ಸಿಬ್ಬಂದಿಗಳು ಗ್ರಾಮದ ಚಂದ್ರಶೇಖರ್ ಎನ್ನುವವರ ಜಮೀನಿನಲ್ಲಿ ಬೋನು ಇರಿಸಿದ್ದರು. ಬೋನಿನಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಅದರೊಳಗೆ ಬಂಧಿಯಾಗಿದೆ.
ಸೆರೆ ಸಿಕ್ಕಿರುವ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗವುದೆಂದು ಆರ್.ಎಫ್.ಓ. ಸಂದೀಪ್ ‘ಉದಯವಾಣಿ’ಗೆ ತಿಳಿಸಿದ್ದಾರೆ.