ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾದ ಘಟನೆ ಸೋಮವಾರ ನಡೆದಿದೆ.
ನಡುಚ್ಚೂರಿನ ದಿವಾಕರ ಹೆಗ್ಡೆ ಎನ್ನುವವರ ಮನೆಯ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ ಹಿಂದೆ ಇಲ್ಲಿನ ಹರೀಶ್ ಹೆಗ್ಡೆ ಅವರ ಮನೆಯ ಕರುವೊಂದನ್ನು ಚಿರತೆ ತಿಂದು ಹಾಕಲಾಗಿತ್ತು.
ಚಿರತೆ ಕಾಟ ಹೆಚ್ಚುತ್ತಿರುವ ಕಾರಣ ಪರಿಸರದ ಜನರು ಭಯಭೀತರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ:ವಿಟ್ಲದಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ: ಎರಡು ಅಂಗಡಿಗಳು ಬೆಂಕಿಗಾಹುತಿ
‘ಮೂರು ದಿನಗಳ ಹಿಂದೆ ಕುತ್ಲೂರಿನ ಬಜಿಲಪಾದೆಯಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಅದೇ ಚಿರತೆ ಇಲ್ಲಿಯೂ ದಾಳಿ ಮಾಡಿರುವ ಶಂಕೆಯಿದೆ. ಬಜಿಲಪಾದೆಯಲ್ಲಿ ಬೋನು ಇಟ್ಟಿದ್ದೇವೆ. ಮಂಗಳವಾರವೇ ನಡುಚ್ಚೂರು ಪರಿಸರದಲ್ಲಿಯೂ ಬೋನು ಇಟ್ಟು, ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ” ಎಂದು ವೇಣೂರು ವಲಯ ಅರಣಾಧಿಕಾರಿ ಮಹೀಂ ಜನ್ ತಿಳಿಸಿದ್ದಾರೆ.