Advertisement

ಸಿಗದ ಚಿರತೆ; ತಪ್ಪದ ಆತಂಕ

11:26 PM Dec 04, 2022 | Team Udayavani |

ಬೆಂಗಳೂರು/ಮೈಸೂರು: ಚಿರತೆ ಕಂಡುಬಂದು ಆತಂಕಕ್ಕೆ ಗುರಿಯಾಗಿರುವ ಬೆಂಗಳೂರು, ಮೈಸೂರಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಬೆಂಗಳೂರು ಪರಿಸರದ ಚಿರತೆ ಅರಣ್ಯ ಪ್ರದೇಶ ಸೇರಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಮೈಸೂರಿನ ಟಿ.ನರಸೀಪುರದಲ್ಲಿ ಇಬ್ಬರನ್ನು ಬಲಿ ಪಡೆದಿರುವ ಚಿರತೆಯನ್ನು ಸೆರೆ ಹಿಡಿಯಲು 13 ತಂಡಗಳನ್ನು ರಚಿಸಲಾಗಿದೆ. ಮೈಸೂರು, ಬಂಡೀಪುರದಿಂದ ವಿಶೇಷ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು, ಇದರಲ್ಲಿ 120ಕ್ಕಿಂತ ಅಧಿಕ  ಸಿಬಂದಿ ಇದ್ದಾರೆ.  ಪ್ರತಿ ತಂಡದಲ್ಲಿ ಒಬ್ಬ ಶಾರ್ಪ್‌ ಶೂಟರ್‌ ಇದ್ದು, ಅವರಿಗೆ ಅಗತ್ಯ ಪರಿಕರ ನೀಡಲಾಗಿದೆ. 20 ಡ್ರೋನ್‌  ಕೆಮರಾ ತರಿಸಿಕೊಂಡು ಚಿರತೆ ಸಂಚಾರದ ಗ್ರಾಮಗಳಲ್ಲಿ ಅಳವಡಿಸಲಾಗಿದೆ.

ಕೆಮರಾ ಟ್ರ್ಯಾಪ್‌ನಲ್ಲಿ  ಸೆರೆ?:

ಚಿರತೆ ಮೊದಲ ಬಲಿ ಪಡೆದ ಪ್ರದೇಶದಲ್ಲಿ ಇಲಾಖೆ ಇರಿಸಿದ್ದ  ಕೆಮರಾ ಟ್ರ್ಯಾಪ್‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಅದರ ಹೆಜ್ಜೆ ಗುರುತು, ಎರಡೂ ಘಟನೆಗಳಲ್ಲಿ ಕಂಡುಬಂದ ಹೆಜ್ಜೆ ಗುರುತುಗಳಲ್ಲಿ ಸಾಮ್ಯತೆ ಇರುವುದರಿಂದ ಅದುವೇ ಮನುಷ್ಯಹಂತಕ ಚಿರತೆ ಎನ್ನಲಾಗಿದೆ.  ಚಿರತೆ ಇರುವ ಸ್ಥಳವನ್ನು ಇಲಾಖೆ ಖಾತ್ರಿಪಡಿಸಿಕೊಂಡಿದ್ದು, ಒಂದೆರೆಡು ದಿನ

ಗಳಲ್ಲಿ  ಅದನ್ನು ಸೆರೆ ಹಿಡಿಯುವ ನಿರೀಕ್ಷೆ ಇದೆ. ಇನ್ನೊಂದೆಡೆ, ಚಿರತೆ ಬೋನಿಗೆ ಬೀಳದೇ ಇದ್ದರೆ ಗುಂಡು ಹಾರಿಸಿ ಕೊಲ್ಲುವ ಆದೇಶದ ಬಗ್ಗೆ ಪ್ರಾಣಿ ಪ್ರಿಯರು ಆಕ್ಷೇಪಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಚಿರತೆಯ ಶೋಧಕ್ಕಾಗಿ 3 ದಿನಗಳಿಂದ ಪ್ರಯತ್ನಿಸಲಾಗುತ್ತಿದೆ. ತುರಹಳ್ಳಿ, ದೇವನಹಳ್ಳಿಯ ಐಟಿಸಿ ಕಾರ್ಖಾನೆ ಪ್ರದೇಶ ಹಾಗೂ ಕೆಂಗೇರಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಯನ್ನು ಪತ್ತೆ ಹಚ್ಚಲು 30ಕ್ಕೂ ಅಧಿಕ ಅರಣ್ಯ ಸಿಬಂದಿಯ ತಂಡವು  ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಚಿರತೆಯು ಬನ್ನೇರುಘಟ್ಟದ ಕಾಡಿಗೆ ಹೋಗಿರುವ ಸಾಧ್ಯತೆಗಳಿವೆ. ಬೇರೆ ಕಾಡಿಗೆ ಸಂಚರಿಸುತ್ತಿದ್ದಾಗ ಆಹಾರಕ್ಕಾಗಿ ನಗರ ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆ ಸಿಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಕಾಡುಗಳಿಗೆ ಹೊಂದಿಕೊಂಡಿರುವ ನಗರಗಳಿಗೆ ಹಿಂದೆಯೂ ಚಿರತೆಗಳು ಬರುತ್ತಿದ್ದವು. ಇದು ಹೊಸ ವಿಚಾರವಲ್ಲ. ತುರಹಳ್ಳಿ, ಐಟಿಸಿ ಕಾರ್ಖಾನೆ ಬಳಿ ಹಿಂದೆ ಕುರುಚಲು ಗಿಡ, ಕಾಡುಗಳಿತ್ತು. ಅದೇ ಪ್ರದೇಶಗಳಲ್ಲಿ ಜನ ಸಾಮಾನ್ಯರು ಬಡಾವಣೆ ಮಾಡಿದ್ದಾರೆ. ಹೀಗಾಗಿ ಚಿರತೆ ಕೆಲವೊಮ್ಮೆ ಬಂದು ಹೋಗುವುದು ಸಹಜವಾಗಿದ್ದು, ಜನರು  ಆತಂಕಪಡುವ ಅಗತ್ಯವಿಲ್ಲ. ಮನುಷ್ಯನನ್ನು ಚಿರತೆ ಕೊಂದ ಪ್ರಕರಣಗಳು ವಿರಳ.– ಚರಣ್‌, ಸಹಾಯಕ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next