Advertisement

ಲೆನಿನ್‌ ಪ್ರತಿಮೆ ಧ್ವಂಸ; ದೇಶಾದ್ಯಂತ ಚರ್ಚೆ

09:10 AM Mar 07, 2018 | Team Udayavani |

ತ್ರಿಪುರದಲ್ಲಿ 25 ವರ್ಷಗಳ ಕಮ್ಯೂನಿಸ್ಟ್‌ ಆಡಳಿತಕ್ಕೆ ತೆರೆ ಎಳೆದ ಬಿಜೆಪಿ, ಅಧಿಕಾರಕ್ಕೇರುವ ಮುನ್ನವೇ ವಿವಾದಕ್ಕೀಡಾಗಿದೆ. ಇಲ್ಲಿ ಕಮ್ಯೂನಿಸ್ಟ್‌ ನಾಯಕ “ಲೆನಿನ್‌’ ಅವರ ಎರಡು ಪ್ರತಿಮೆಗಳನ್ನು ಕಿಡಿಗೇಡಿಗಳು ಧ್ವಂಸಗೈದಿದ್ದಾರೆ. ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡೂ ಘಟನೆಗಳು ನಡೆದಿವೆ. ಈ ಕೃತ್ಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದ್ದು, ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಈ ಘಟನೆ ಬಗ್ಗೆ ಪರ-ವಿರೋಧ ಚರ್ಚೆಗಳೂ ಆರಂಭವಾಗಿವೆ.

Advertisement

ಘಟನೆ ನಡೆದಿದ್ದೆಲ್ಲಿ?
ದಕ್ಷಿಣ ತ್ರಿಪುರ ಜಿಲ್ಲೆಯ ಬೆಲೋನಿಯಾ ಎಂಬ ನಗರದಲ್ಲಿ. ಸೋಮವಾರ ಜೆಸಿಬಿ ಯಂತ್ರವೊಂದರ ಜತೆಗೆ ಬಂದ ಕೆಲ ಕಿಡಿಗೇಡಿಗಳ ಗುಂಪು ನಗರದಲ್ಲಿದ್ದ ಲೆನಿನ್‌ ಪ್ರತಿಮೆಯನ್ನು ನೆಲಸಮ ಮಾಡಿದೆ. ಅದು ನೆಲಕ್ಕುರುಳು ತ್ತಿದ್ದಂತೆ, ಯುವಕರ ಗುಂಪು “ಬೋಲೋ ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ತಮಿಳುನಾಡಿನಲ್ಲಿ ವಾಕ್ಸಮರ
“ಲೆನಿನ್‌ ಪ್ರತಿಮೆಯಂತೆಯೇ, ತಮಿಳುನಾಡಿನ ಜಾತಿವಾದಿ ಪೆರಿಯಾರ್‌ ಅವರ ಪುತ್ಥಳಿಯನ್ನೂ ಮುಂದೊಂದು ದಿನ ಕೆಡವಲಾಗುತ್ತದೆ’ ಎಂದು ತಮಿಳುನಾಡು ಬಿಜೆಪಿ ನಾಯಕ ಎಚ್‌. ರಾಜಾ ಹೇಳಿದ್ದಾರೆ. ರಾಜಾ ಅವರನ್ನು ಬಂಧಿಸಬೇಕೆಂದು ಡಿಎಂಕೆ ನಾಯಕ ಸ್ಟಾಲಿನ್‌ ಆಗ್ರಹಿಸಿದ್ದಾರೆ. ಎಂಡಿಎಂಕೆ ನಾಯಕ ವೈಕೋ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿ, “ಪೆರಿಯಾರ್‌ ಪುತ್ಥಳಿ ಕೆಡವಲು ಯತ್ನಿಸುವವರ ಕೈ ಕತ್ತರಿಸಲಾಗುವುದು’ ಎಂದಿದ್ದಾರೆ.

ಪೊಲೀಸರು ಏನಂತಾರೆ?
ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ತ್ರಿಪುರ ಜಿಲ್ಲೆಯ ಪೊಲೀಸ್‌ ಅಧಿ ಕಾರಿ ಮೊಂಚಾಕ್‌ ಇಪ್ಪರ್‌, ಧ್ವಂಸ ಪ್ರಕರಣ ಸಂಬಂಧ ಜೆಸಿಬಿ ಯಂತ್ರದ ಚಾಲಕ ನನ್ನು ಬಂಧಿಸಲಾಗಿದ್ದು, ಆತ ಜಾಮೀನು ಪಡೆದು ಹೊರಬಂದಿದ್ದಾನೆ. ಭಗ್ನಗೊಂಡ ಪ್ರತಿಮೆಯನ್ನು ಬೆಲೋ ನಿಯಾ ಮುನ್ಸಿಪಲ್‌ ಕಾರ್ಪೊರೇಶನ್‌ಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಲೆನಿನ್‌ ಪ್ರತಿಮೆಯ ವಿವರ
ಸುಮಾರು ಐದು ಅಡಿ ಎತ್ತರವಿದ್ದ ಫೈಬರ್‌ ಗ್ಲಾಸ್‌ನಲ್ಲಿ ನಿರ್ಮಾಣವಾಗಿದ್ದ ಲೆನಿನ್‌ರ ಪ್ರತಿಮೆಯಿದು.ತ್ರಿಪುರದ ಬೆಲೋನಿಯಾದ ವೃತ್ತವೊಂದರ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಇದನ್ನು ಸಿಪಿಎಂನ ಪಾಲಿಟ್‌ ಬ್ಯೂರೋ ಸದಸ್ಯ ಪ್ರಕಾಶ್‌ ಕಾರಾಟ್‌ ಅವರು ಕೆಲವು ತಿಂಗಳುಗಳ ಹಿಂದಷ್ಟೇ ಉದ್ಘಾಟಿಸಿದ್ದರು.

Advertisement

ರಾಜನಾಥ್‌ ಸಿಂಗ್‌ ಮಾತುಕತೆ
ವಿವಾದ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ತ್ರಿಪುರ ರಾಜ್ಯಪಾಲ ಹಾಗೂ ಪೊಲೀಸ್‌ ಮಹಾ ನಿರ್ದೇಶಕರ ಜತೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಇತ್ತ, ದಿಲ್ಲಿಯಲ್ಲಿ ಗೃಹ ಇಲಾಖೆ, ಪರಿಸ್ಥಿತಿ ನಿಭಾಯಿಸಲು ಬೇಕಿರುವ ಅಗತ್ಯ ಕೇಂದ್ರೀಯ ಪಡೆಗಳು ಹಾಗೂ ಪೊಲೀಸ್‌ ಪಡೆಯನ್ನು ತ್ರಿಪುರ ಹೊಂದಿದೆ ಎಂದಿದೆ.

ಸ್ಥಳೀಯರು ಲೆನಿನ್‌ ಪ್ರತಿಮೆ ಬದಲು ವಿವೇಕಾನಂದ, ವಲ್ಲಭಬಾಯಿ ಪಟೇಲ್‌, ಮದರ್‌ ಥೆರೆಸಾ ಪುತ್ಥಳಿ ನಿರ್ಮಿಸುವ ಆಸಕ್ತಿ ಹೊಂದಿದ್ದಾರೆ. ಹಾಗಾಗಿ, ಲೆನಿನ್‌ ಪ್ರತಿಮೆ ಕೆಡವಿದ್ದಾರೆ.
– ಸಬ್ರತಾ ಚಕ್ರವರ್ತಿ, ತ್ರಿಪುರ ಬಿಜೆಪಿ ವಕ್ತಾರ

ಲೆನಿನ್‌ ರಷ್ಯಾದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿದಾತ. ತನ್ನ ದಬ್ಟಾಳಿಕೆಯಿಂದ ಸಾವಿರಾರು ಜನರನ್ನು ಕೊಂದ ಆತಂಕವಾದಿ. ಅಂಥವನ ಪುತ್ಥಳಿ ನಮಗೆ ಬೇಕೇ?
 – ಸುಬ್ರಹ್ಮಣ್ಯನ್‌ ಸ್ವಾಮಿ, ಬಿಜೆಪಿ ಸಂಸದ

ವಿದೇಶಿ ನಾಯಕರ ಪುತ್ಥಳಿಗಳು ನಮಗೆ ಬೇಕಿಲ್ಲ. ನಮ್ಮಲ್ಲೇ ಗಾಂಧಿ, ಅಂಬೇಡ್ಕರ್‌, ವಿವೇಕಾನಂದ, ದೀನ್‌ ದಯಾಳ್‌ರಂಥ ನಾಯಕರಿದ್ದಾರೆ. ಅವರ ಪುತ್ಥಳಿಗಳು ಬೇಕು.
– ಹನ್ಸರಾಜ್‌ ಅಹಿರ್‌, ಕೇಂದ್ರ ಸಚಿವ

ಲೆನಿನ್‌ ಪುತ್ಥಳಿ ಬೀಳಿಸಿದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಪೆಟ್ಟು. ಭಗತ್‌ ಸಿಂಗ್‌, ಆತನ ಸಹಚರರೂ ಲೆನಿನ್‌ನಿಂದ ಸ್ಫೂರ್ತಿಗೊಂಡಿದ್ದರೆಂಬುದನ್ನು ಬಿಜೆಪಿ ಮರೆಯಬಾರದು.
– ಶರದ್‌ ಪವಾರ್‌, ಎನ್‌ಸಿಪಿ ನಾಯಕ

ಈ ಕೃತ್ಯವನ್ನು ಸಹಿಸಲಾಗದು. ಸಿಪಿಎಂ ನಮ್ಮ ವಿರೋಧಿ, ಲೆನಿನ್‌ ನನ್ನ ನಾಯಕನಲ್ಲ.ಆದರೆ, ಲೆನಿನ್‌ರಂಥ ನಾಯಕರ ಪ್ರತಿಮೆ ಧ್ವಂಸ ಮಾಡುವುದನ್ನು ಒಪ್ಪಲಾಗದು.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next