Advertisement

ಸೀಲ್‌ ಡೌನ್‌ ಪ್ರದೇಶಕ್ಕೆ ಶಾಸಕ ವೇದವ್ಯಾಸ ಕಾಮತ್‌ ಭೇಟಿ

11:29 PM May 01, 2020 | Sriram |

ಮಂಗಳೂರು: ಕೋವಿಡ್- 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್‌ ಡೌನ್‌ ಜಾರಿಗೊಳಿಸಿರುವ ನಗರದ ಬೋಳೂರು, ಶಕ್ತಿನಗರ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಅವರು ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬೋಳೂರು, ಶಕ್ತಿನಗರ ಪ್ರದೇಶವನ್ನು ವೈರಾಣು ಹರಡದಂತೆ ಪೂರ್ಣ ಪ್ರಮಾಣದಲ್ಲಿ ಸೀಲ್‌ಡೌನ್‌ ಜಾರಿಗೊಳಿಸಲಾಗಿದೆ. ಈ ಪ್ರದೇಶದ ಎಲ್ಲ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್- 19 ದಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಬೋಳೂರಿನಲ್ಲಿ ನಡೆಸಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಬೋಳೂರು, ಶಕ್ತಿನಗರದ ಎಲ್ಲ ಮನೆಗಳಿಗೂ ಹಾಲು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಬರ್ಕೆ ಪೊಲೀಸ್‌ ಠಾಣಾಧಿಕಾರಿ ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಅತೀ ಅಗತ್ಯ ಎಂದರು.

ನಮ್ಮೆಲ್ಲರ ರಕ್ಷಣೆಗಾಗಿ ಸೀಲ್‌ ಡೌನ್‌ ಜಾರಿಗೊಳಿಸಲಾಗಿದೆ. ಈಗಾಗಲೇ ಒಂದು ಹಂತದಲ್ಲಿ ಕಿಟ್‌ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಗುವುದು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಮನೆ ಮನೆಗೆ ತಮ್ಮ ಆರೋಗ್ಯ ಪರೀಕ್ಷಿಸಲು ಭೇಟಿ ನೀಡಲಿದ್ದು, ಆ ಸಂದರ್ಭ ಸಹಕರಿಸಬೇಕು ಎಂದರು.

ಮನಪಾ ಸದಸ್ಯರಾದ ಜಗದೀಶ್‌ ಶೆಟ್ಟಿ ಬೋಳೂರು, ಸ್ಮಾರ್ಟ್‌ ಸಿಟಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಮನಪಾ ಅಧಿಕಾರಿಗಳು, ಪಕ್ಷದ ಮುಖಂಡರಾದ ರಾಹುಲ್‌ ಶೆಟ್ಟಿ, ರೋಷನ್‌, ಚೇತನ್‌, ಎಂಪಿಡಬ್ಲ್ಯು ಕಾರ್ಯಕರ್ತರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next