Advertisement

Legislative Council ಮತದಾರರ ಪಟ್ಟಿ: 10,840 ಪದವೀಧರರು, 2,188 ಶಿಕ್ಷಕರು ನೋಂದಣಿ

11:21 PM Nov 06, 2023 | Team Udayavani |

ಉಡುಪಿ: ಮುಂಬರುವ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವ ಪ್ರಕ್ರಿಯೆ ನ.6ಕ್ಕೆ ಪೂರ್ಣಗೊಂಡಿದ್ದು ಜಿಲ್ಲೆಯಲ್ಲಿ 10,840 ಪದವೀಧರರು ಹಾಗೂ 2,188 ಶಿಕ್ಷಕರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

Advertisement

ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಜಿಲ್ಲೆಯ ಪದವೀಧರರು ಹಾಗೂ ಶಿಕ್ಷಕರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಪದವೀಧರರು, ಶಿಕ್ಷಕರು ನಿರೀಕ್ಷಿತ ಮಟ್ಟದಲ್ಲಿ ನೋಂದಾಯಿಸಿಕೊಂಡಿಲ್ಲ.

ಉಡುಪಿ ಹೋಬಳಿಯಲ್ಲೇ ಹೆಚ್ಚು
ಜಿಲ್ಲೆಯ 10 ಹೋಬಳಿಗಳಲ್ಲಿ ಉಡುಪಿ ಹೋಬಳಿಯಲ್ಲೇ ಶೇ.50ರಷ್ಟು ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೈಂದೂರಿನಿಂದ 532, ವಂಡ್ಸೆಯಿಂದ 340, ಕುಂದಾಪುರದಿಂದ 694, ಕೋಟದಿಂದ 350, ಬ್ರಹ್ಮಾವರದಿಂದ 524, ಉಡುಪಿಯಿಂದ 5,853, ಕಾಪುವಿನಲ್ಲಿ 1,006, ಹೆಬ್ರಿಯಲ್ಲಿ 209, ಅಜೆಕಾರ್‌ನಲ್ಲಿ 211 ಹಾಗೂ ಕಾರ್ಕಳದಲ್ಲಿ 1,121 ಪದವೀಧರರು ಸೂಕ್ತ ದಾಖಲೆ ಒದಗಿಸಿಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದಾರೆ.

ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಂದೂರಿನ 210, ವಂಡ್ಸೆಯ 119, ಕುಂದಾಪುರದ 249, ಕೋಟದ 91, ಬ್ರಹ್ಮಾವರದ 129, ಉಡುಪಿಯ 708, ಕಾಪುವಿನ 203, ಹೆಬ್ರಿಯ 57, ಅಜೆಕಾರ್‌ನ 35 ಹಾಗೂ ಕಾರ್ಕಳದ 387 ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೂಕ್ತ ದಾಖಲೆ ಒದಗಿಸಿದ್ದಾರೆ.

ಪದವೀಧರರ ನಿರಾಸಕ್ತಿ
ಪದವೀಧರರು ನಿರೀಕ್ಷಿತ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿಕೊಂಡಿಲ್ಲ. ಪದವಿ ಪ್ರಮಾಣ ಪತ್ರವನ್ನು ತಾಲೂಕು ಕಚೇರಿಗೆ ತೆಗೆದುಕೊಂಡು ಹೋಗಬೇಕು. ಗೆಜೆಟೆಡ್‌ ಅಧಿಕಾರಿಯಿಂದ ದೃಢೀಕರಿಸಬೇಕು. ಇದರ ಜತೆಗೆ ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಹೀಗೆ ನಿಯಮವೂ ಸ್ವಲ್ಪ ಕಠಿನವಿದ್ದರಿಂದ ಯುವ ಪದವೀಧರರು ನೋಂದಾಯಿಸಿಕೊಳ್ಳಲು ಮುಂದೆ ಬಂದಿಲ್ಲ. ಜಿಲ್ಲಾಡಳಿತದಿಂದ ಈ ಬಗ್ಗೆ ಪ್ರಚಾರ ಪ್ರಕ್ರಿಯೆ ನಡೆಸಿದ್ದರೂ ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳು ಯುವ ಪದವೀಧರರಲ್ಲಿ ಅರಿವು, ಜಾಗೃತಿ ಮೂಡಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಕನಿಷ್ಠ 25 ಸಾವಿರ ಪದವೀಧರರು ನೋಂದಾಯಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಅಂತಿಮವಾಗಿ ನೋಂದಾಯಿಸಿಕೊಂಡಿದ್ದು 10,840 ಪದವೀಧರರು ಮಾತ್ರ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next