ವಿಧಾನ ಪರಿಷತ್ತು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಚಿಂತನೆ ಇದ್ದು ಕೆಲವೆಡೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲೂ ಆರಂಭಿಸುವ ಉದ್ದೇಶ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿಷಯ ಪ್ರಸ್ತಾಪಿಸಿ, ಹೊಸ ವೈದ್ಯಕೀಯ ಕಾಲೇಜುಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇವೆಯೇ? ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? ಇದ್ದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಎಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ದಾವಣಗೆರೆ, ಉಡುಪಿ, ಕೋಲಾರ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ವಿಜಯನಗರದಲ್ಲಿ ಇಲ್ಲ. ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬುದು ಸರ್ಕಾರದ ನೀತಿಯಾಗಿದೆ. ರಾಜ್ಯ ಸರ್ಕಾರದಿಂದ ಇದಕ್ಕಾಗಿ 610 ಕೋಟಿ ರೂ. ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ 60 ಕೋಟಿ ರೂ. ಆವರ್ತಕ ವೆಚ್ಚದ ಅವಶ್ಯಕತೆ ಇದೆ. ಅದರಂತೆ ಅನುದಾನದ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೆಲವೆಡೆ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ. ಐಡೆಕ್ಸ್ ಕೂಡ ತನ್ನ ವರದಿಯಲ್ಲಿ ಇದನ್ನು ಹೇಳಿತ್ತು. ಈ ಸಂಬಂಧ ಸಭೆಯನ್ನೂ ನಡೆಸಲಾಯಿತು. ಆದರೆ ಪಿಪಿಪಿ ಅಡಿ ನಿರ್ಮಿಸಲು ನಮಗೆ ನೀಡಿರುವ ಪ್ರಸ್ತಾವನೆ ಅಷ್ಟೊಂದು ಸಮರ್ಪಕ ಅನಿಸಲಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಮತ್ತಷ್ಟು ಪರಿಶೀಲನೆ ನಡೆಸಿ, ಮತ್ತೂಂದು ಆಯಾಮದಿಂದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡದ ಪುತ್ತೂರು ಮತ್ತು ಉಡುಪಿಯಲ್ಲಿ ಕುಂದಾಪುರ ಅಥವಾ ಬೈಂದೂರಿನಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.